ಚಾಮರಾಜನಗರ: ಚಿರತೆ ದಾಳಿ; ಜಾನುವಾರುಗಳಿಗೆ ಗಾಯ

ಚಾಮರಾಜನಗರ: ಹನೂರು ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮದ ತೋಟದ ಮನೆಯಲ್ಲಿ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಗಂಗನದೊಡ್ಡಿ ಗ್ರಾಮದ ಅಬ್ದುಲ್ ಅವರಿಗೆ ಸೇರಿದ ತೋಟದ ಮನೆಯಲ್ಲಿ ಕಟ್ಟಿ ಹಾಕಿದ್ದ ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಜಾನುವಾರುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಗಂಗನದೊಡ್ಡಿ ಗ್ರಾಮವು ಕಾಡಿನ ಅಂಚಿನಲ್ಲಿರುವುದರಿಂದ ಆಗಾಗ್ಗೆ ಚಿರತೆ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಸಂಘದ ಮುಖಂಡ ಅಮ್ಜದ್ ಖಾನ್ ದೂರಿದರು.
ಕಳೆದ ಮೂರು ವರ್ಷಗಳಿಂದ ಗಂಗನದೊಡ್ಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಚಿರತೆ ಹಾವಳಿ ಹೆಚ್ಚಾಗಿದೆ. ಗುರುವಾರ ಮುಂಜಾನೆ ತೋಟದೊಳಗೆ ನುಗ್ಗಿದ ಚಿರತೆ, ಕಟ್ಟಿ ಹಾಕಿದ್ದ ದನಕರುಗಳ ಮೇಲೆ ದಾಳಿ ನಡೆಸಿದೆ ಎಂದು ಅಬ್ದುಲ್ ತಿಳಿಸಿದರು.
ಇಷ್ಟೆಲ್ಲಾ ಕಾಡು ಪ್ರಾಣಿಗಳ ಉಪಟಳವಿದ್ದರೂ ಅರಣ್ಯ ಇಲಾಖೆಯು ಕೇವಲ ಕಾಟಾಚಾರಕ್ಕೆ ಬೋನುಗಳನ್ನು ಇಟ್ಟಿರುವುದೇ ಹೊರತು, ಚಿರತೆ ಸೆರೆಗೆ ಗಂಭೀರ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರಲ್ಲಿ ತೀವ್ರ ಬೇಸರ ಮೂಡಿಸಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ತಕ್ಷಣ ಎಚ್ಚೆತ್ತು ಚಿರತೆ ಸೆರೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.







