ಚಾಮರಾಜನಗರ : ಖಾಸಗಿ ಬಸ್ ಚಾಲಕ ಹೃದಯಾಘಾತದಿಂದ ನಿಧನ

ಚಾಮರಾಜನಗರ : ಖಾಸಗಿ ಬಸ್ ಚಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ ನಡೆದಿದೆ.
ಹನೂರು ತಾಲೂಕಿನ ಮೀಣ್ಯಂ ಗ್ರಾಮದ ಖಾಸಗಿ ಬಸ್ ಚಾಲಕ ರಮೇಶ್ (47) ಮೃತ ವ್ಯಕ್ತಿ.
ಹನೂರು ಪಟ್ಟಣದಿಂದ ಕೊಳ್ಳೇಗಾಲಕ್ಕೆ ಸಚಿನ್ ಹೆಸರಿನ ಖಾಸಗಿ ಬಸ್ ಚಾಲನೆ ಮಾಡಿಕೊಂಡು ತೆರಳುತ್ತಿದ್ದಾಗ ಮಧುವನಹಳ್ಳಿ ಗ್ರಾಮದ ಬಳಿ ಎದೆ ನೋವು ಕಾಣಿಸಿಕೊಂಡಿದೆ. ಚಾಲಕ ರಮೇಶ್ ತಕ್ಷಣ ಬಸ್ ನಿಲ್ಲಿಸಿ ಆಟೋದ ಮೂಲಕ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಊಟದ ವ್ಯತ್ಯಾಸದಿಂದ ಎದೆ ಉರಿ ಕಾಣಿಸಿಕೊಂಡಿರಬಹುದು ಎಂದು ತಿಳಿಸಿದ್ದಾರೆ.
ನಂತರ ಚಾಲಕ ರಮೇಶ್ ಖಾಸಗಿ ಬಸ್ ನಿಲ್ದಾಣದಲ್ಲಿ ತೆರಳಿ ಕೋಲ್ಡ್ ಜ್ಯೂಸ್ ಕುಡಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು ಜನನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರ ವೇಳೆಗೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಸಂಜೆಯಾದರೂ ಆಸ್ಪತ್ರೆಯ ಮುಂಭಾಗದಲ್ಲಿ ಆಂಬುಲೆನ್ಸ್ ನಲ್ಲಿ ಮೃತದೇಹವನ್ನು ಇರಿಸಿಕೊಂಡಿದ್ದನ್ನು ಗಮನಿಸಿದ ಸಾರ್ವಜನಿಕರು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ.