ಹುಲಿ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಐದು ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ

ಚಾಮರಾಜನಗರ: ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮದ ಪಚ್ಚೆದೊಡ್ಡಿಯಲ್ಲಿ ಹುಲಿಯನ್ನು ಹತ್ಯಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳನ್ನು ಐದು ದಿನಗಳ ಕಾಲ ಅರಣ್ಯ ಅರಣ್ಯಾಧಿಕಾರಿಗಳ ಕಸ್ಟಡಿಗೆ ನೀಡಲಾಗಿದೆ.
ವಶದಲ್ಲಿರುವ ಪಚ್ಚೆಮಲ್ಲು, ಗಣೇಶ, ಶಂಪು ಎಂಬವರನ್ನು ಅರಣ್ಯಾಧಿಕಾರಿಗಳು ಇಂದು ಹನೂರಿನಲ್ಲಿರುವ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಈ ಮೂವರು ಆರೋಪಿಗಳನ್ನು ಐದು ದಿನಗಳ ಕಾಲ ಅರಣ್ಯಾಧಿಕಾರಿಗಳ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದ ನ್ಯಾಯಾಧೀಶೆ ಕಾವ್ಯಶ್ರೀ, ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದಾರೆ.
ಪಚ್ಚೆದೊಡ್ಡಿ ಬಳಿ ಜಾನುವಾರು ಭೇಟಿಯಾಡಿದ್ದ ಹುಲಿಯನ್ನು ವಿಷವಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಭಾಗಿಯಾಗಿರುವುದನ್ನು ಅರಣ್ಯಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಪಚ್ಚೆಮಲ್ಲು, ಗಣೇಶ, ಶಂಪು , ಗೋವಿಂದಗೌಡ ಎಂಬವರನ್ನು ರವಿವಾರ ವಶಕ್ಕೆ ಪಡೆಯಲಾಗಿತ್ತು. ಪ್ರಕರಣದಲ್ಲಿ ಗೋವಿಂದಗೌಡರ ಪಾತ್ರವಿಲ್ಲ ಎಂಬುದನ್ನು ಮನಗಂಡ ಅರಣ್ಯಾಧಿಕಾರಿಗಳು ಅವರನ್ನು ಪ್ರಕರಣದಿಂದ ಕೈಬಿಟ್ಟು, ಉಳಿದ ಮೂವರನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಿದ್ದ, ಚಂದು, ಗೋವಿಂದ ಹಾಗೂ ಅಭಿಷೇಕ್ ಎಂಬವರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ಮುಂದುವರಿಸಿದ್ದಾರೆ.







