ಸಿಜೆಐ ಮೇಲೆ ಶೂ ಎಸೆತ ಪ್ರಕರಣ | ಚಾಮರಾಜನಗರ ಜಿಲ್ಲಾ ಕೇಂದ್ರ ಬಂದ್

ಚಾಮರಾಜನಗರ : ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೋರ್ವ ಶೂ ಎಸೆಯಲು ಯತ್ನಿಸಿದ ಪ್ರಕರಣವನ್ನು ಖಂಡಿಸಿ ಸಂವಿಧಾನ ರಕ್ಷಣಾ ಸಮಿತಿ ಸಹಿತ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಬಂದ್ ನಡೆಯಿತು.
ಚಾಮರಾಜನಗರ ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಮೆಡಿಕಲ್‌ಶಾಪ್ ಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳು ಮುಚ್ಚುವ ಮೂಲಕ ಬೆಂಬಲ ಸೂಚಿಸಿದವು. ಉಳಿದಂತೆ ಹಲವು ಶಾಲಾ ಕಾಲೇಜುಗಳು ಎಂದಿನಂತೆ ನಡೆದರೆ ಕೆಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ಚಾಮರಾಜನಗರದ ಪಚ್ಚಪ್ಪ ಸರ್ಕಲ್‌ಗೆ ಸಂಪರ್ಕ ಕಲ್ಪಿಸುವ ನಾಲ್ಕು ಕಡೆಗಳಲ್ಲೂ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಿಸಲಾಗಿತ್ತು. ನಗರ ವ್ಯಾಪ್ತಿಯಲ್ಲಿ ಆಟೊಗಳು, ಸ್ಕೂಟರ್‌ಗಳು, ಕಾರುಗಳನ್ನು ಹೊರತುಪಡಿಸಿದರೆ ಬೇರೆ ವಾಹನಗಳ ಸಂಚಾರ ಇರಲಿಲ್ಲ.
ತಮಿಳುನಾಡು, ಮೈಸೂರು, ಬೆಂಗಳೂರು ಕಡೆಯಿಂದ ಬರುವ ಹೋಗುವ ವಾಹನಗಳು ನಗರದ ಒಳಗೆ ಪ್ರವೇಶಿಸದೇ ಬೈಪಾಸ್ ಮೂಲಕ ಸಂಚಾರ ನಡೆಸಿದವು. ಸಾರಿಗೆ ಹಾಗೂ ಖಾಸಗಿ ಬಸ್‌ಗಳನ್ನು ನಗರದ ಹೊರಗೆ ತಡೆದ ಪರಿಣಾಮ ನಗರಕ್ಕೆ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಯಿತು. ಅಲ್ಲದೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.







