ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಜೆಪಿಯ 11 ನಗರಸಭಾ ಸದಸ್ಯರ ಉಚ್ಚಾಟನೆ

ಚಾಮರಾಜನಗರ, ಸೆ.28 : ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಬಿಜೆಪಿಯ 11 ನಗರಸಭೆ ಸದಸ್ಯರನ್ನು ರಾಜ್ಯ ಸಮಿತಿ ಸೂಚನೆ ಮೇರೆಗೆ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ನಿರಂಜನ್ ಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಡಿ ಕೊಳ್ಳೇಗಾಲ ನಗರಸಭೆಯ 10 ಮಂದಿ ಸದಸ್ಯರು ಹಾಗೂ ಚಾಮರಾಜನಗರ ನಗರಸಭೆಯ ಓರ್ವ ಸದಸ್ಯ ಸೇರಿದಂತೆ 11 ಸದಸ್ಯರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟಿಸಲಾಗಿದೆ ಎಂದು ನಿರಂಜನ್ ಕುಮಾರ್ ತಿಳಿಸಿದ್ದಾರೆ.
ಉಚ್ಛಾಟನೆಗೆ ಕಾರಣ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯಲ್ಲಿ ಬಿಎಸ್‌ಪಿ ಒಬ್ಬರು, ಪಕ್ಷೇತರರು 4 ಮಂದಿ, ಬಿಜೆಪಿ 12, ಕಾಂಗ್ರೆಸ್ ಅಭ್ಯರ್ಥಿಗಳು 14 ಮಂದಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸಿದ್ದವು. 12 ಸದಸ್ಯರನ್ನು ಹೊಂದಿರುವ ಬಿಜೆಪಿ ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನಾಮಪತ್ರ ಸಲ್ಲಿಸಲು ಸೂಚಿಸಲಾಗಿತ್ತು. ಪಕ್ಷೇತರರ ಬೆಂಬಲ ಪಡೆದು ಅಧಿಕಾರ ಹಿಡಿಯುವ ಪ್ರಯತ್ನ ಸಾಗಿತು. ಈ ವೇಳೆ ಹಾಲಿ ಶಾಸಕ ಎ .ಆ. ಕೃಷ್ಣಮೂರ್ತಿ, ಮಾಜಿ ಶಾಸಕ ಜಯಣ್ಣ ನಗರಸಭೆಯ ಅಧಿಕಾರ ಹಿಡಿಯಲು ತೆರೆ-ಮರೆಯ ಪ್ರಯತ್ನ ನಡೆಸಿ ಬಿಜೆಪಿಯಿಂದ ಆರಿಸಿ ಬಂದ 12 ಮಂದಿಯ ಪೈಕಿ 10 ಮಂದಿಯ ಬೆಂಬಲ ಪಡೆದರು. ಕೊನೆಗೆ ಬಿಜೆಪಿಯ ಅಭ್ಯರ್ಥಿ ಕಣಕ್ಕಿಳಿಸಲು ಸೂಚಕರು, ಅನುಮೋದಕರು ಇಲ್ಲದಂತಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ 12 ಮಂದಿ ಸದಸ್ಯರ ಪೈಕಿ ಚಿಂತು ಪರಮೇಶ್, ಸಿರೀಶಾ ಹೊರತುಪಡಿಸಿದರೆ ಉಳಿದೆಲ್ಲರೂ ಕಾಂಗ್ರೆಸ್ ಜೊತೆ ಬಹಿರಂಗವಾಗಿಯೇ ಕೈ ಜೋಡಿಸಿದ್ದಕ್ಕೆ ಬಿಜೆಪಿ ತಮ್ಮ ಪಕ್ಷದ ಸದಸ್ಯರನ್ನು ಉಚ್ಛಾಟಿಸಿದ್ದಾರೆ ಎನ್ನಲಾಗಿದೆ.
ಕಳೆದ ನಗರಸಭೆ ಚುನಾವಣೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೊತೆ ಕೈ ಜೋಡಿಸಿ, ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಮತ ಹಾಕದಂತೆ ಪಕ್ಷದ ನಿಯಮ ಉಲ್ಲಂಘಿಸಿದ್ದರು. ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಇವರು ನಿರಂತರ ಪಾಲ್ಗೊಂಡಿದ್ದಾರೆ. ರಾಜ್ಯ ಸಮಿತಿಯ ಶಿಫಾರಸಿನ ಮೇರೆಗೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹಾಲಿ ನಗರಸಭಾ ಸದಸ್ಯರಾಗಿರುವ ಬಿಜೆಪಿ ಚಿನ್ನೆಯಡಿ ಆರಿಸಿ ಬಂದಿರುವ ಜಿ ಪಿ.ಶಿವಕುಮಾರ್, ನಾಗಸುಂದ್ರಮ್ಮ ಜಗದೀಶ್, ನಾಸೀರುದ್ದಿನ್, ರಾಮಕೃಷ್ಣ, ಕವಿತಾ, ಮಾನಸ ಪ್ರಭುಸ್ವಾಮಿ, ಪವಿತ್ರ, ಧರಣೀಶ್, ಶಂಕನಪುರ ಪ್ರಕಾಶ್, ನಾಗೇಂದ್ರ ಹಾಗೂ ಚಾಮರಾಜನಗರ ನಗರಸಭೆ ಸದಸ್ಯ ಮಹದೇವಯ್ಯ ಅವರನ್ನು ತಕ್ಷಣದಿಂದಲೇ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ
-ನಿರಂಜನ್ ಕುಮಾರ್, ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷ







