ಹನೂರು | ಬಾಲ್ಯ ವಿವಾಹ; 5 ಮಂದಿ ವಿರುದ್ಧ ಪ್ರಕರಣ ದಾಖಲು

ಹನೂರು, ಸೆ.17: ಬಾಲ್ಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿ ರಾಮಪುರ ಪೊಲೀಸ್ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಹನೂರು ತಾಲೂಕಿನ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸತ್ಯಮಂಗಲ ಗ್ರಾಮದ ಗಿರಿ ಮಂಜ, ಬಾಲಕಿಯ ಚಿಕ್ಕಪ್ಪ, ನಾಗಮಾದ, ಸಣ್ಣತಾಯಿ, ಮಣಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಘಟನೆಯ ವಿವರ: ಹನೂರು ತಾಲೂಕಿನ ಬಾಲಕಿಯನ್ನು ಗಿರಿಮಂಜ ಎಂಬ ಯುವಕ ಪ್ರೀತಿಸಿ ಮದುವೆಯಾಗಿದ್ದ. ಇದೀಗ ಎರಡು ತಿಂಗಳ ಗರ್ಭಿಣಿಯಾಗಿರುವ ಹಿನ್ನೆಲೆ ರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಹೋಗಿದ್ದಾಗ ವೈದ್ಯಾಧಿಕಾರಿಗಳು ಮಕ್ಕಳ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇವರು ಚಾಮರಾಜನಗರ ಮಹಿಳಾ ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿ ಗರ್ಭಿಣಿ ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಹೇಳಿಕೆ ಪಡೆಯಲಾಗಿತ್ತು. ಬಾಲಕಿಯ ಹೇಳಿಕೆ ಹಿನ್ನೆಲೆ ಕಾರ್ಮಿಕ ನಿರೀಕ್ಷಕ ಪ್ರಸಾದ್ ಬಾಲ್ಯ ವಿವಾಹ ಮಾಡಿದ್ದವರ ಮೇಲೆ ದೂರು ನೀಡಿದ್ದರು.
ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಐದು ಜನರ ಮೇಲೆ ಪ್ರಕರಣ ದಾಖಲಾಗಿದೆ.





