ಚಾಮರಾಜನಗರ | ವಿಷಪೂರಿತ ಹಣ್ಣು ಸೇವಿಸಿದ 12 ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು

ಚಾಮರಾಜನಗರ : ವಿಷಕಾರಿ ಹಣ್ಣು ತಿಂದು 12 ಮಕ್ಕಳು ಅಸ್ವಸ್ಥರಾದ ಘಟನೆ ಯಳಂದೂರು ತಾಲೂಕಿನ ಯರಿಯೂರು ಗ್ರಾಮದಲ್ಲಿ ರವಿವಾರ ಸಂಜೆ ನಡೆದಿದೆ. ಮಹಾರಾಷ್ಟ್ರ ಮೂಲದ ಕಾರ್ಮಿಕರ ಮಕ್ಕಳು ಅಸ್ವಸ್ಥಗೊಂಡವರಾಗಿದ್ದಾರೆ.
ಕೂಲಿ ಅರಸಿ ಕಬ್ಬು ಕಟಾವು ಮಾಡಲು ಮಹಾರಾಷ್ಟ್ರ ಮೂಲದ ಕಾರ್ಮಿಕರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದು ಬಿಡಾರ ಹೂಡಿದ್ದು, ಒಂದು ತಂಡ ಯರಿಯೂರಲ್ಲಿ ಟೆಂಟ್ ಹಾಕಿದ್ದಾರೆ.
ರಸ್ತೆಬದಿ ಬಿಟ್ಟಿದ್ದ ಮರಳೆಕಾಯಿಯನ್ನು ಹಣ್ಣೆಂದು ಭಾವಿಸಿ ತಿಂದು ವಾಂತಿ ಮಾಡಿಕೊಳ್ಳುವುದನ್ನು ಕಂಡ ಪಾಲಕರು ಕೂಡಲೇ ಚಾಮರಾಜನಗರ ಜಿಲ್ಲೆಯ ಯಳಂದೂರು ಆಸ್ಪತ್ರೆಗೆ ಮಕ್ಕಳನ್ನು ಕರೆತಂದಿದ್ದಾರೆ. ಯಳಂದೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ, ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ವೈದ್ಯರೊಬ್ಬರು ಪ್ರತಿಕ್ರಿಯಿಸಿ, ಮಕ್ಕಳು ತುಂಬಾ ಅಸ್ವಸ್ಥಗೊಂಡಿದ್ದಾರೆ. ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಯಳಂದೂರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.





