ಚಾಮರಾಜನಗರ | ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ಪೋಷಕರು!

ರಸ್ತೆಯಲ್ಲಿ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ಪೋಷಕರು!
ಚಾಮರಾಜನಗರ : ತಾಲೂಕಿನ ಹರವೆ ಹೋಬಳಿಯ ಸಾಗಡೆ ಮತ್ತು ತಮ್ಮಡಹಳ್ಳಿ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ 10-15 ದಿನದ ನವಜಾತ ಹೆಣ್ಣು ಶಿಶುವನ್ನು ಪಂಚೆಯಲ್ಲಿ ಸುತ್ತಿಟ್ಟು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲ್ಲೂಕಿನ ಸಾಗಡೆ ತಮ್ಮಡಹಳ್ಳಿ ರಸ್ತೆ ಬದಿಯಲ್ಲಿದ್ದ ಮಗುವನ್ನು ಸ್ಥಳೀಯರಾದ ಪರಮೇಶ್ ಎಂಬುವವರು ಕಂಡು ಕೂಡಲೇ ಸಾಗಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಆರೈಕೆ ಮಾಡಿಸಿದ್ದಾರೆ.
ರಸ್ತೆ ಬದಿಯಲ್ಲಿ ನವಜಾತ ಶಿಶು ಸಿಕ್ಕಿರುವ ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಎಂಬುವವರು ಆಸ್ಪತ್ರೆಗೆ ಭೇಟಿ ಕೊಟ್ಟು, ಮಗುವನ್ನು ಚಾಮರಾಜನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆ ತಂದಿದ್ದಾರೆ. ಸದ್ಯ ಮಗುವನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈ ಕುರಿತು ಮಗುವನ್ನು ರಕ್ಷಿಸಿದ ಸ್ಥಳೀಯ ಪರಮೇಶ್ ಮಾತನಾಡಿ, ಚಾಮರಾಜನಗರಕ್ಕೆ ಬರುತ್ತಿದ್ದಾಗ ಸಾಗಡೆ ಮತ್ತು ತಮ್ಮಡಹಳ್ಳಿ ಮಾರ್ಗ ಮಧ್ಯೆ ಯಾರೋ ಒಬ್ಬರು ನಿಂತು ನೋಡುತ್ತಿದ್ದರು. ನಾನು ಏನಿರಬಹುದು ಅಂತ ನೋಡಿದಾಗ ಚಿಕ್ಕ ಮಗುವಿತ್ತು. ನಂತರ ಆಶಾಕಾರ್ಯಕರ್ತೆಗೆ ಫೋನ್ ಮಾಡಿ ಮಗುವನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದೆವು. ನಂತರ ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಕರೆತಂದಿದ್ದೇವೆ' ಎಂದಿದ್ದಾರೆ.
ಈ ಬಗ್ಗೆ ಅಂಗನವಾಡಿ ಕಾರ್ಯಕರ್ತೆ ನಾಗಮಣಿ ಅವರು ಮಾತನಾಡಿ, ನಾನು ಅಂಗನವಾಡಿಯಲ್ಲಿರಬೇಕಾದ್ರೆ ನನಗೆ ಒಂದು ಫೋನ್ ಬಂತು. ರಸ್ತೆ ಬದಿ ಮಗು ಸಿಕ್ಕಿರುವುದಾಗಿ ಹೇಳಿದ್ರು. ತಕ್ಷಣವೇ ನಾನು ಸ್ಥಳಕ್ಕೆ ಬಂದೆ. ಮಗುವನ್ನು ನೋಡಿದಾಗ ಚೆನ್ನಾಗಿತ್ತು. ನಂತರ ಸಾಗಡೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದೊಯ್ದೆವು. ಅಲ್ಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಭೇಟಿ ನೀಡಿ ಮಗುವನ್ನು ನೋಡಿದರು. ನಂತರ ಮಗು ಸುಸ್ತಾಗಿದ್ದರಿಂದಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ಗೆ ಫೋನ್ ಮಾಡಿದೆವು. ಇದೀಗ ಜಿಲ್ಲಾಸ್ಪತ್ರೆಗೆ ಕರೆತಂದಿದ್ದೇವೆ. ಈಗ ಮಗು ಆರೋಗ್ಯವಾಗಿದೆ' ಎಂದು ಹೇಳಿದ್ದಾರೆ.







