Chamarajanagar | ಬುದ್ಧಿ ಮಾಂದ್ಯ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿ ಶಿಕ್ಷಕ ಸೇವೆಯಿಂದ ವಜಾ

ಸಾಂದರ್ಭಿಕ ಚಿತ್ರ | PC : freepik.com
ಚಾಮರಾಜನಗರ, ಮೇ 12 : ಬುದ್ಧಿಮಾಂದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ 3 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ಶಿಕ್ಷಕನೊಬ್ಬನನ್ನು ಸೇವೆಯಿಂದಲೇ ವಜಾಗೊಳಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರುಬರದೊಡ್ಡಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೆಂಕಟನಾರಾಯಣ ಸೇವೆಯಿಂದ ವಜಾಗೊಂಡಿರುವ ಶಿಕ್ಷಕ. ಈತ 2024 ನ.8 ರಂದು ಬುದ್ದಿಮಾಂದ್ಯ ವಿದ್ಯಾರ್ಥಿನಿಯೊಬ್ಬಳು ಸರಕಾರದಿಂದ ನೀಡುವ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ಶಾಲೆಗೆ ಬಂದಾಗ ಕರ್ತವ್ಯದಲ್ಲಿದ್ದ ಶಿಕ್ಷಕ ವೆಂಕಟನಾರಾಯಣ ವಿದ್ಯಾರ್ಥಿಯನ್ನು ಕೊಠಡಿಯೊಳಗೆ ಕರೆದುಕೊಂಡು ಹೋಗಿ ಬಾಗಿಲನ್ನು ಹಾಕಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾಗ ವಿದ್ಯಾರ್ಥಿನಿ ಕಿರುಚಿಕೊಂಡು ಕೊಠಡಿ ಹೊರ ಬಂದು ತಮ್ಮ ಪೋಷಕರಿಗೆ ತಿಳಿಸಿದ್ದಳು.
ವಿದ್ಯಾರ್ಥಿನಿಯ ಪೋಷಕರು ಶಿಕ್ಷಕ ವೆಂಕಟನಾರಾಯಣ ವಿರುದ್ಧ ಕ್ರಮಕೈಗೊಳ್ಳುವಂತೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಧಿಕಾರಿಗಳು ದೂರನ್ನು ದಾಖಲಿಸಿಕೊಂಡು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಸಿ.ಶ್ರೀಕಾಂತ್ ಅವರು ಶಿಕ್ಷಕ ವೆಂಕಟನಾರಾಯಣನಿಗೆ 3 ವರ್ಷ ಒಂದು ತಿಂಗಳು ಜೈಲು ಶಿಕ್ಷೆ, 15 ಸಾವಿರ ರೂ, ದಂಡವನ್ನು ಕಟ್ಟುವಂತೆ ಆದೇಶ ನೀಡಿದ್ದರು.




