ತಮಿಳುನಾಡಿಗೆ ಕಾವೇರಿ ನೀರು ಹರಿವು : ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ

ಚಾಮರಾಜನಗರ : ಸಕಾಲಕ್ಕೆ ಮಳೆಯಾಗದೇ ಭೀಕರ ಬರದಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಮಾರಕವಾಗುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿ ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 3500 ಕ್ಯೂಸೆಕ್ ನೀರು ಹರಿಸುವಂತೆ ಸೂಚನೆ ನೀಡಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ರೈತರು ಮತ್ತು ಕನ್ನಡ ಚಳವಳಿಗಾರರಿಂದ ಸರಣಿ ಪ್ರತಿಭಟನೆ ನಡೆದವು.
ರೈತ ಸಂಘದಿಂದ ಪ್ರತಿಭಟನೆ : ತಮಿಳುನಾಡಿಗೆ ನೀರುಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಸಾಮೂಹಿಕ ನಾಯಕತ್ವ) ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಚಾಮರಾಜನಗರದ ಶ್ರೀ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ಕುಡಿಯಲು ಶೇಖರಣೆ ಮಾಡಿರುವ ನೀರನ್ನು ತಮಿಳುನಾಡಿಗೆ ಹರಿಸಲು ಸಿಡಬ್ಲ್ಯೂಆರ್‍ಸಿ ಹೇಳಿರುವುದು ಸರಿಯಲ್ಲ. ಶೇಖರಿಸಿರುವ ಎಲ್ಲ ನೀರನ್ನು ಅವರಿಗೆ ಕೊಟ್ಟರೆ ನಮ್ಮ ಕರ್ನಾಟಕದ ಜನತೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಅಧ್ಯಕ್ಷೀಯ ಮಂಡಳಿ ಸದಸ್ಯರಾದ ನಟರಾಜು ಬಂದಿಗೌಡನಹಳ್ಳಿ, ಅಂಬಳೆ ಶಿವಕುಮಾರ್, ಕರಿಯಪ್ಪ, ಪಾಪಣ್ಣ, ಮುಖಂಡರಾದ ಮಂಜು, ಮಹೇಶ್, ರಾಜು, ಶಶಿಕುಮಾರ್, ಗಣೇಶ್, ಮಹೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.






