Chamarajanagar | ಕಳ್ಳಬೇಟೆ ತಡೆ ಶಿಬಿರದಲ್ಲಿದ್ದ ಪಡಿತರ ಹೊತ್ತೊಯ್ದ ದುಷ್ಕರ್ಮಿಗಳು

ಚಾಮರಾಜನಗರ : ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಮರಿಮಂಗಲದಲ್ಲಿ ಆಗಸ್ಟ್ 15ರಂದು ನಡೆದ ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ಹಾಗೂ ಧ್ವಂಸ ಪ್ರಕರಣಗಳು ಮುಂದುವರಿದಿವೆ. ಮಲ್ಲಯ್ಯನಪುರ ಸಮೀಪದ ದೇವಿರಬೆಟ್ಟದಲ್ಲಿರುವ ಕಳ್ಳಬೇಟೆ ತಡೆ ಶಿಬಿರಕ್ಕೆ ನುಗ್ಗಿದ ದುಷ್ಕರ್ಮಿಗಳು, ಅರಣ್ಯ ಸಿಬ್ಬಂದಿಗಾಗಿ ಅರಣ್ಯ ಇಲಾಖೆ ಸಂಗ್ರಹಿಸಿಟ್ಟಿದ್ದ ಸುಮಾರು ಒಂದು ತಿಂಗಳ ಪಡಿತರವನ್ನು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಹನೂರು ತಾಲ್ಲೂಕಿನ ಮಲ್ಲಯ್ಯನಪುರ ಸಮೀಪದ ದೇವರ ಬೆಟ್ಟದಲ್ಲಿರುವ ಕಳ್ಳಬೇಟೆ ತಡೆ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಾಗಿ ಅಕ್ಕಿ, ಬೇಳೆ, ತರಕಾರಿ, ಅಡುಗೆ ಎಣ್ಣೆ ಸೇರಿದಂತೆ ಒಂದು ತಿಂಗಳಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಶಿಬಿರಕ್ಕೆ ನುಗ್ಗಿದ ಕಿಡಿಗೇಡಿಗಳು ಪಡಿತರವನ್ನು ಸಂಪೂರ್ಣವಾಗಿ ಕದ್ದೊಯ್ದಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಮರಿಮಂಗಲದಿಂದ ಸುಮಾರು ನಾಲ್ಕೈದು ಕಿ.ಮೀ. ದೂರದಲ್ಲಿರುವ ಕಳ್ಳಬೇಟೆ ತಡೆ ಶಿಬಿರದ ಮೇಲೂ ಗುಂಪೊಂದು ದಾಳಿ ನಡೆಸಿತ್ತು. ಶಿಬಿರದ ಬಳಿ ಜಿಲೆಟಿನ್ ಸ್ಫೋಟ ನಡೆಸಿ, ಮಂಚ, ಪಾತ್ರೆ-ಪಗಡೆ ಹಾಗೂ ದಿನಸಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಗಸ್ತಿಗೆ ಬಳಸುತ್ತಿದ್ದ ಸ್ಕೂಟರ್‌ಗೂ ಬೆಂಕಿ ಹಚ್ಚಲಾಗಿತ್ತು ಎಂದು ತಿಳಿದುಬಂದಿದೆ.




