Chamarajanagar | ನಂಜದೇವನಪುರ ಗ್ರಾಮದಲ್ಲಿ 5 ಹುಲಿಗಳು ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಚಾಮರಾಜನಗರ : ಗಡಿಜಿಲ್ಲೆಯಲ್ಲಿ ಹುಲಿಗಳ ಓಡಾಟದಿಂದ ಜನರು ಬೆಚ್ಚಿ ಬೀಳುತ್ತಿದ್ದಾರೆ. ಇದೀಗ, ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರದ ಆತಂಕ ಮನೆ ಮಾಡಿದೆ.
5 ಹುಲಿಗಳು ಹಾದುಹೋದ ದೃಶ್ಯ ನಂಜದೇವನಪುರ ಗ್ರಾಮದ ಕುಮಾರಸ್ವಾಮಿ ಎಂಬುವರ ಜಮೀನಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಮರಾಜನಗರ ತಾಲೂಕಿನ ನಂಜದೇವಪುರದ ಜಮೀನಿನ ಪಕ್ಕವೇ ಆನೆಮಡುವಿನ ಕೆರೆಯಿದ್ದು, ಅಲ್ಲಿಂದ 5 ಹುಲಿಗಳು ತೆರಳುವಾಗ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆ.
ಕೆರೆ ಬಳಿ ಹುಲಿಗಳು ಪ್ರತ್ಯಕ್ಷವಾಗಿದ್ದನ್ನು ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಈ ಹಿಂದೆ ಇದೇ ನಂಜದೇವನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಆರ್ಟಿ ಚಾಮರಾಜನಗರ ಬಫರ್ ಅರಣ್ಯ ಇಲಾಖೆ ಸಿಬ್ಬಂದಿ ಹುಲಿಗಳ ಸೆರೆಗಾಗಿ ತೀವ್ರ ಕೂಂಬಿಂಗ್ ನಡೆಸಿದ್ದರಾದರೂ ಸೆರೆಯಾಗಿರಲಿಲ್ಲ. ಈಗ ಮತ್ತೆ ಹುಲಿಗಳು ಕಾಣಿಸಿಕೊಂಡಿರುವುದು ರೈತರನ್ನು ಆತಂಕಕ್ಕೀಡುಮಾಡಿದೆ. ಮಾಹಿತಿ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





