ಚಾಮರಾಜನಗರ | ಮಹದೇಶ್ವರ ಬೆಟ್ಟದಲ್ಲಿ ಅದ್ದೂರಿ ದೀಪಾವಳಿ ಮಹಾ ರಥೋತ್ಸವ

ಚಾಮರಾಜನಗರ : ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಶ್ರೀ ಸಾಲೂರು ಬೃಹನ್ ಮಠಾಧಿತಿ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ತೇರನ್ನು ವಿವಿಧ ಬಗೆಯ ಪುಷ್ಪಗಳು, ತಳಿರು ತೋರಣ, ಬಣ್ಣದ ಬಟ್ಟೆಗಳಿಂದ ಸಿಂಗರಿಸಲಾಗಿತ್ತು.
ರಥೋತ್ಸವಕ್ಕೂ ಮುನ್ನ ಸಾಲೂರು ಬೃಹನ್ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕ ವೃಂದದವರು ದೇಗುಲದ ಗರ್ಭಗುಡಿಯಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೇರಿನ ಬಳಿ ಧಾರ್ಮಿಕ ವಿಧಿ ವಿಧಾನ, ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಆ ಬಳಿಕ ಉತ್ಸವ ಮೂರ್ತಿ ಇರಿಸಿ ಬೂದು ಕುಂಬಳಕಾಯಿ ದೃಷ್ಟಿ ತೆಗೆದು ಮಹಾಮಂಗಳಾರತಿ ಹಾಗೂ ಬೇಡಗಂಪಣ ಸಮುದಾಯದ ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಲಾಯಿತು. ಬಳಿಕವಷ್ಟೇ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿ ದ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರು ಎಳೆಯಲಾಯಿತು. ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವು ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು.







