CHAMARAJANAGARA | ಬಾಳೆತೋಟದಲ್ಲಿ ನಿತ್ರಾಣ ಸ್ಥಿತಿಯಲ್ಲಿದ್ದ ಹುಲಿಯ ರಕ್ಷಣೆ

ಚಾಮರಾಜನಗರ : ನಿತ್ರಾಣಗೊಂಡ ಸ್ಥಿತಿಯಲ್ಲಿ ಬಾಳೆತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಸೆರೆ ಹಿಡಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲನಿ ಬಳಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಗಸ್ತಿನ ಮುಕ್ತಿ ಕಾಲನಿಯ ಬಾಳೆತೋಟದಲ್ಲಿ ಹುಲಿಯೊಂದು ಆರೋಗ್ಯ ಸಮಸ್ಯೆಯಿಂದ ನಿತ್ರಾಣಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳ ತಂಡವು, ನಿತ್ರಾಣಗೊಂಡಿರುವ ಹುಲಿಯನ್ನು ಅರಿವಳಿಕೆ ಚುಚ್ಚುಮದ್ದು ಸಿಡಿಸಿ, ನಂತರ ಬಲೆ ಹಾಕಿ ಸೆರೆಹಿಡಿಯಿತು.
ಸೆರೆ ಹಿಡಿಯಲ್ಪಟ್ಟ ಸುಮಾರು ಆರು ವರ್ಷದ ಪ್ರಾಯದ ಗಂಡು ಹುಲಿ ಸದ್ಯ ಸುರಕ್ಷಿತವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಎನ್.ಪ್ರಭಾಕರನ್ ನೇತೃತ್ವದಲ್ಲಿ ನಡೆದ ಈ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್, ವಲಯ ಅರಣ್ಯಾಧಿಕಾರಿ ಪುನೀತ್, ಪಶು ವೈದ್ಯಾಧಿಕಾರಿ ಡಾ.ವಾಸಿಂ ಮಿರ್ಝಾ, ಮದ್ದೂರು ಹಾಗೂ ಓಂಕಾರ ವಲಯದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗಿಯಾಗಿದ್ದರು.







