ಚಾಮರಾಜನಗರ| ಹಣಕಾಸು ವಿಚಾರಕ್ಕೆ ಜಗಳ: ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ

ಚಾಮರಾಜನಗರ: ಹಣಕಾಸು ವಿಚಾರಕ್ಕೆ ಜಗಳವಾಗಿ ಮನನೊಂದು ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದ ರೈತ ನಾಗಣ್ಣ(40) ಆತ್ಮಹತ್ಯೆ ಮಾಡಿಕೊಂಡವರು. ಈತ ಕೇರಳ ಮೂಲದ ಮನ್ಸೂರ್ ಜೊತೆ ವೀರನಪುರ ಗ್ರಾಮದ ಮಹದೇವಪ್ಪ ಎಂಬುವವರ ಜಮೀನನ್ನು ಗುತ್ತಿಗೆ ಮಾಡಿಕೊಂಡು ವ್ಯವಸಾಯ ಮಾಡಿಕೊಂಡು ಬಂದ ಲಾಭದಲ್ಲಿ ಸಮನಾಗಿ ಹಂಚಿಕೆ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರಂತೆ ಜಮೀನಿನಲ್ಲಿ ತರಕಾರಿ ಬೆಳೆದು ಬಂದ ಲಾಭದಲ್ಲಿ ಮೃತ ನಾಗಣ್ಣನಿಗೆ ಹಣ ನೀಡಲಿಲ್ಲ ಎಂಬ ವಿಚಾರವಾಗಿ ಇಬ್ಬರ ನಡುವೆ ಪರಸ್ಪರ ಮಾತು ಬೆಳೆದು ಮನ್ಸೂರ್ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದ ಮನನೊಂದು ನಾಗಣ್ಣ ನಿನ್ನೆ ರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮೃತ ನಾಗಣ್ಣನ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಕೇರಳ ಮೂಲದ ಮನ್ಸೂರ್ ಮತ್ತು ಪ್ರಸನ್ನ ಎಂಬುವವರ ವಿರುದ್ಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಗುಂಡ್ಲುಪೇಟೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.







