ಚಾಮರಾಜನಗರ | ಕರಡಿ ದಾಳಿ: ಯುವಕ ಮೃತ್ಯು

ಚಾಮರಾಜನಗರ: ಜೇನು ಸಂಗ್ರಹಿಸಲು ಕಾಡಿಗೆ ತೆರಳಿದ್ದ ಸೋಲಿಗ ಯುವಕನೋರ್ವನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟ ಘಟನೆ ಜಿಲ್ಲೆಯ ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಸೀಗೆ ಬೆಟ್ಟ ಎಂಬಲ್ಲಿ ನಡೆದಿರುವುದು ವರದಿಯಾಗಿದೆ.
ಸೀಗೆ ಬೆಟ್ಟ ಪೋಡಿನ ನಿವಾಸಿ ರಂಗೇಗೌಡ ಎಂಬವರ ಪುತ್ರ ಸಿದ್ದ (30) ಮೃತಪಟ್ಟವರು. ಇವರು ಸೋಮವಾರ ಮಧ್ಯಾಹ್ನ ಜೇನು ಸಂಗ್ರಹಿಸಲು ಕಾಡಿನೊಳಗೆ ಹೋಗಿದ್ದ ವೇಳೆ ಕರಡಿಯೊಂದು ದಾಳಿ ನಡೆಸಿದೆ. ಇದರಿಂದ ಸಿದ್ದು ಮುಖ ಮತ್ತು ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಪರಿಹಾರ ವಿತರಣೆ: ಕರಡಿ ದಾಳಿಯಿಂದ ಮೃತಪಟ್ಟ ಸಿದ್ದು ಅವರ ನಿವಾಸಕ್ಕೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಸಿದ್ದು ಕುಟುಂಬಕ್ಕೆ ಸರಕಾರದ ಪರವಾಗಿ 5 ಲಕ್ಷ ರೂ. ಗಳ ಪರಿಹಾರ ಚೆಕ್ ವಿತರಣೆ ಮಾಡಿದರು. ಉಳಿಕೆ ಪರಿಹಾರ ನಿಧಿಯನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ವಿ. ಚಂದ್ರು, ಉಪವಿಭಾಗಾಧಿಕಾರಿ ಮಹೇಶ್, ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಉಪ ಸಂರಕ್ಷಣಾಧಿಕಾರಿ ಶ್ರೀಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್, ವಲಯ ಅರಣ್ಯಾಧಿಕಾರಿ ವಾಸು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್. ಬಿಂದ್ಯಾ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಗ್ರಾಪಂ ಸದಸ್ಯ ಸಿ.ಡಿ. ಮಹದೇವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







