ಚಾಮರಾಜನಗರ | ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಗ್ರಾ.ಪಂ ಮಾಜಿ ಉಪಾಧ್ಯಕ್ಷರ ಮನೆ ಸುಟ್ಟು ಭಸ್ಮ

ಚಾಮರಾಜನಗರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷರ ಮನೆ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಇಂದು ಬೆಳಗ್ಗೆ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಸಂಭವಿಸಿದೆ.
ಮುಳ್ಳೂರು ಗ್ರಾಮ ಪಂಚಾಯ್ತಿಯ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಮಹೇಶ್ ಅವರ ಮನೆಯಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಸುಮಾರು 40 ಗ್ರಾಂ ಚಿನ್ನಾಭರಣಗಳು (ಓಲೆ, ಉಂಗುರ, ಸರ), ರೂ. 2 ಲಕ್ಷ ನಗದು, ಟಿವಿ, ಫ್ಯಾನ್, ವಿದ್ಯುತ್ ಉಪಕರಣಗಳು, ಗೃಹೋಪಯೋಗಿ ಸಾಮಗ್ರಿಗಳು ಹಾಗೂ ಪ್ರಮುಖ ದಾಖಲೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ನಾಯಕರ ಬೀದಿಯಲ್ಲಿರುವ ಮಹೇಶ್ ಅವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಗಮನಿಸಿದ ಸ್ಥಳೀಯರು ಮೊದಲು ಗ್ಯಾಸ್ ಸಿಲಿಂಡರ್ ಸ್ಫೋಟವಾಗಿರಬಹುದು ಎಂಬ ಶಂಕೆಯಿಂದ ದೂರದಿಂದಲೇ ಬೆಂಕಿ ನಂದಿಸಲು ಯತ್ನಿಸಿದ್ದು, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರೂ, ಮನೆ ಕಟ್ಟಲು ಸಂಗ್ರಹಿಸಿಟ್ಟಿದ್ದ ನಗದು, ಚಿನ್ನಾಭರಣಗಳು ಹಾಗೂ ಇತರೆ ಸಾಮಗ್ರಿಗಳು ಈಗಾಗಲೇ ನಾಶವಾಗಿವೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ಪಡೆದ ಬಳಿಕ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆ ಮತ್ತು ಸಾಮಗ್ರಿಗಳನ್ನು ಕಳೆದುಕೊಂಡ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಹಾಗೂ ಚಂದ್ರಮ್ಮ ನಾಗರಾಜು ಮತ್ತು ಗ್ರಾಮ ಪಂಚಾಯ್ತಿ ಸದಸ್ಯ ಮಹೇಶ್ ಕುಟುಂಬಕ್ಕೆ ತಾತ್ಕಾಲಿಕ ವಾಸ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.







