Chamarajanagar | ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಎರೆಕಟ್ಟೆ ಬಳಿ ಗಂಡಾನೆಯ ಕಳೇಬರ ಪತ್ತೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ಅರಣ್ಯ ವಲಯದ ಪುರಾಣಿ ಶಾಖೆ ವ್ಯಾಪ್ತಿಯ ಎರೆಕಟ್ಟೆ ಕೆರೆ ಸಮೀಪ ಗಂಡು ಆನೆಯೊಂದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಸುಮಾರು 30-35 ವರ್ಷ ವಯಸ್ಸಿನ ಗಂಡು ಆನೆ (ಟಸ್ಕರ್) ಇದಾಗಿದ್ದು, ಮತ್ತೊಂದು ಗಂಡು ಆನೆಯೊಂದಿಗೆ ನಡೆದ ಆಂತರಿಕ ಕಾಳಗವೇ ಸಾವಿಗೆ ಕಾರಣವಾಗಿರಬಹುದೆಂಬ ಶಂಕೆ ಅರಣ್ಯ ಇಲಾಖೆಯಿಂದ ವ್ಯಕ್ತವಾಗಿದೆ.
ಅರಣ್ಯ ಸಿಬ್ಬಂದಿಗಳು ಪುರಾಣಿ ಶಾಖೆಯ ವ್ಯಾಪ್ತಿಯಲ್ಲಿ ನಡೆಸಿದ ನಿಯಮಿತ ಗಸ್ತು ಕಾರ್ಯದ ವೇಳೆ ಪ್ರದೇಶದಲ್ಲಿ ತೀವ್ರ ದುರ್ವಾಸನೆ ಕಂಡುಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯ ಕೈಗೊಂಡಾಗ ಆನೆಯ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದ ಸುತ್ತಮುತ್ತ ವ್ಯಾಪಕವಾಗಿ ಹೆಜ್ಜೆ ಗುರುತುಗಳು, ಮಣ್ಣಿನ ಕಾಳಗ ಅಲುಗಾಡಿಕೆ ಹಾಗೂ ಸಂಘರ್ಷದ ಗುರುತುಗಳು ಕಂಡುಬಂದಿದ್ದು, ಆನೆಗಳ ನಡುವೆ ನಡೆದಿರುವುದನ್ನು ಸ್ಪಷ್ಟಪಡಿಸುತ್ತದೆ.
ಮಾಹಿತಿ ಪಡೆದ ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ನಂತರ ನಿಖರ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.





