ಚಾಮರಾಜನಗರ | ದೊಡ್ಡರಾಯಪೇಟೆ ಗೇಟ್ ಬಳಿ ಹೆದ್ದಾರಿ ತಡೆದು ರೈತರಿಂದ ಪ್ರತಿಭಟನೆ

ಚಾಮರಾಜನಗರ: ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ ಕಟಾವು ಮತ್ತು ಸಾಗಾಣಿಕೆ ಕೂಲಿಯನ್ನು ಬಿಟ್ಟು 3,500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ರಸ್ತೆ ತಡೆ ಚಳುವಳಿ ನಡೆಸಲಾಯಿತು.
ಚಾಮರಾಜನಗರದ ದೊಡ್ಡರಾಯನಪೇಟೆ ಗೇಟ್ ಬಳಿ ಜಮಾಯಿಸಿದ ರೈತ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕರೆಹುಂಡಿ ಭಾಗ್ಯರಾಜ್ ಮಾತನಾಡಿ, ಪ್ರತಿ ಟನ್ ಕಬ್ಬಿಗೆ 3,500 ರೂ. ನಿಗದಿ ಪಡಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಸ್ತೆತಡೆ ಚಳುವಳಿಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಬೆಲೆ ಆಯೋಗಒಂದು ಟನ್ ಕಬ್ಬು ಬೆಳೆಯಲು 4,500 ಖರ್ಚಾಗುತ್ತದೆ ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ವರದಿ ನೀಡಿದೆ. ಆದರೂ, ಸಹ ಕೇಂದ್ರ ಸರ್ಕಾರವು 10.25 ಪ್ರತಿ ಟನ್ ಗೆ 3,550 ರೂ. ನಿಗದಿ ಮಾಡಿ ಆದೇಶವನ್ನು ನೀಡಿದೆ. ಕಳೆದ ವರ್ಷ 9.5 ಇಳುವರಿಗೆ 3,400 ರೂ. ನಿಗದಿ ಮಾಡಿದ್ದು, ಒಂದು ಕೆಜಿ ಕಬ್ಬಿಗೆ ಹದಿನೈದು ಪೈಸೆ ಮಾತ್ರ ಜಾಸ್ತಿ ಮಾಡಿ ಮತ್ತೊಂದು ಕಡೆ ಇಳುವರಿಯನ್ನು ಸಕ್ಕರೆ ಕಾರ್ಖಾನೆಗಳ ಪರವಾಗಿ ಜಾಸ್ತಿ ಮಾಡಿ ಸಕ್ಕರೆ ಕಾರ್ಖಾನೆಗಳು ಮತ್ತು ಬಂಡವಾಳಶಾಹಿಗಳ ಪರ ಆದೇಶವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ದೂರಿದರು.
ರಾಜ್ಯದಲ್ಲಿ ಕಳೆದ ವರ್ಷ 5 ಕೋಟಿ 40 ಲಕ್ಷ ಟನ್ ಕಬ್ಬನ್ನು ಸಕ್ಕರೆ ಕಾರ್ಖಾನೆಗಳು ಅರಿದಿವೆ. ಪ್ರಸಕ್ತ 6 ಕೋಟಿ 50 ಲಕ್ಷ ಟನ್ ಅಷ್ಟು ಕಬ್ಬು ರಾಜ್ಯದಲ್ಲಿದೆ. ಪ್ರಸ್ತುತ 10 ಲಕ್ಷ ಟನ್ ಕಬ್ಬು ಕಾರ್ಖಾನೆಗಳಿಗೆ ಬೇಕಾಗಿರುತ್ತದೆ. ಒಂದು ಟನ್ ಕಬ್ಬು ಅರೆದರೆ 120 ಕೆಜಿ ಸಕ್ಕರೆ ಪ್ರಸ್ತುತ ಮಾರುಕಟ್ಟೆ ಬೆಲೆ 4,800 ಇದೆ. ಒಂದು ಟನ್ ಕಬ್ಬಿನಿಂದ 12,500 ರೂ. ಕಾರ್ಖಾನೆಗಳಿಗೆ ಸಿಗುತ್ತದೆ. ಆದ್ದರಿಂದ ರೈತರಿಗೆ ಕಟಾವು ಸಾಗಾಣಿಕೆಯನ್ನು ಬಿಟ್ಟು 3,500 ರೂ. ಪಾವತಿ ಮಾಡಬೇಕು. ಕೇಂದ್ರ ಸರ್ಕಾರವು ಯಥನಾಲ್ ಬಳಕೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಸುಮಾರು 270 ಕೋಟಿ ಲೀಟರ್ ಯಥನಾಲ್ ಉತ್ಪಾದನೆಯಾಗುತ್ತದೆ. ಕೇಂದ್ರ ಸರ್ಕಾರವು ಯಥನಾಲ್ ಹಂಚಿಕೆಯನ್ನು ಕೇವಲ 47 ಕೋಟಿ ಲೀಟರ್ ಮಾತ್ರ ಖರೀದಿಗೆ ಅವಕಾಶ ನೀಡಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ಎಲ್ಲಾ ಯಥನಲ್ ಬಳಕೆಗೆ ಕೇಂದ್ರ ಸರ್ಕಾರ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹಾಲಿನ ನಾಗರಾಜ್, ಆಲೂರು ಮಹೇಶ್ ಪ್ರಭು, ಸಿದ್ದರಾಜು, ಮಹೇಶ್, ರಾಜಣ್ಣ, ಮಲಿಯೂರು ಮಹೇಂದ್ರ, ಪ್ರಕಾಶ್ ಗಾಂಧಿ, ಸತೀಶ್ ಹೊನ್ನಗೌಡನಹಳ್ಳಿ, ಮಹೇಶ್, ಮಧು ಚಿದಂಬರ, ಗುರುವಿನಪುರ ಚಂದ್ರು, ಮೋಹನ್, ಜನ್ನೂರ್ ಶಾಂತರಾಜ್, ಶಿವರಾಜ್, ಅಂಡುವಿನಹಳ್ಳಿ ಮಹೇಶ್, ರಾಜು ಪುಟ್ಟಮಲ್ಲೇಗೌಡ, ಊರ್ದಳ್ಳಿ ರಾಮಣ್ಣ, ಶಾನಂದರಳ್ಳಿ ಬಸವರಾಜು, ನಾಗರಾಜಪ್ಪ ಕಿಳ್ಳಿಪುರ ಶ್ರೀಕಂಠ ಭಾಗವಹಿಸಿದರು.







