ಚಾಮರಾಜನಗರ: ಹುಲಿಗಳು ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ

ಚಾಮರಾಜನಗರ:ಹನೂರು ತಾಲ್ಲೂಕಿನ ಮೀಣ್ಯಂ ಬಳಿಯ ಗಾಜನೂರು ಗಸ್ತ್ ನಲ್ಲಿ ಗುರುವಾರ ಬೆಳಗ್ಗೆ ಅನುಮಾನಸ್ಪದವಾಗಿ ಮೃತಪಟ್ಟ ಐದು ಹುಲಿಗಳನ್ನು ಎನ್ ಟಿ ಸಿ ಎ ಆದೇಶದ ಅನ್ವಯ ಮೃತಪಟ್ಟ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಲಾಯಿತು.
ಶುಕ್ರವಾರ ಬೆಳಗ್ಗೆ ಎಪಿಸಿಸಿಎಫ್ ಶ್ರೀನಿವಾಸ್, ಸಿಸಿಎಫ್ ಹಿರಲಾಲ್, ಎನ್ ಟಿ ಸಿ ಎಲ್ ಪ್ರತಿನಿಧಿ ಸಂಜಯ್ ಗುಬ್ಬಿ, ಮಲ್ಲೇಶಪ್ಪ, ಡಿಸಿಎಫ್ ಚಕ್ರಪಾಣಿ ಸಮ್ಮುಖಕದಲ್ಲಿ ಪಂಚನಾಮೆ ನಡೆಸಿದ ಬಳಿಕ ಅಂತ್ಯ ಕ್ರಿಯೆ ನಡೆಸಿದರು.
ಈ ವೇಳೆ ಮಾತನಾಡಿದ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್, ಇಂತಹ ಘಟನೆ ನಡೆದಿರುವುದು ದುರಂತ. ಹುಲಿ ಸಾವಿಗೆ ಕಾರಣರಾದವರು ಯಾರೇ ಆಗಿರಲಿ ಅವರು ಕೂಡಲೇ ಪೊಲೀಸರಿಗೆ ಶರಣಾಗಬೇಕು. ಕಾಡು ಪ್ರಾಣಿಗಳನ್ನು ಕಾಪಾಡುವ ಜೊತೆಗೆ ಕಾಡಂಚಿನ ಗ್ರಾಮಗಳ ನಿವಾಸಿಗಳ ರಕ್ಷಣೆಯೂ ಆಗಬೇಕಾಗಿದೆ ಎಂದರು.
ಬಳಿಕ ಎಪಿಸಿಸಿಎಫ್ ಶ್ರೀನಿವಾಸ್ ಮಾತನಾಡಿ ಹುಲಿಗಳ ಸಾವು ವಿಷ ಮಿಶ್ರಿತ ಆಹಾರ ಸೇವನೆಯಿಂದ ಅಗಿದೆ ಎನ್ನುವ ಅಂಶ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಲಾಖೆಯಿಂದ ತನಿಖೆಗೆ ಆದೇಶಿಸಲಾಗಿದೆ ತನಿಖೆಯಿಂದ ಸತ್ಯಾ ಸತ್ಯತೆ ಹೊರಬರಲಿದೆ ಎಂದರು.





