ಚಾಮರಾಜನಗರ : ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಬಾಲಕಿ

ಚಾಮರಾಜನಗರ : ಕಬಿನಿ ಜಲಾಶಯದಿಂದ ಗ್ರಾಮದ ಹಳ್ಳ ಕಾಲುವೆಗಳಿಗೆ ನೀರು ಹರಿಸಿ, ಪ್ರಾಣಿ ಪಕ್ಷಿಗಳ ಸಾವು ತಡೆಗಟ್ಟಿ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಬಾಲಕಿಯೊಬ್ಬಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಘಟನೆ ಹನೂರು ತಾಲ್ಲೂಕಿನ ರಾಮಾಪುರ ಹೋಬಳಿಯ ಕೆಪ್ಪಯ್ಯನಹಟ್ಟಿಯಲ್ಲಿ ನಡೆದಿದೆ.
ಕೆಪ್ಪಯ್ಯನಹಟ್ಟಿಯ ವರ್ಣಿಕ ಎಂಬ ಬಾಲಕಿ ಪತ್ರ ಬರೆದು ಗ್ರಾಮದ ಪರಿಸ್ಥಿತಿಯನ್ನು ವಿವರಿಸಿ ವೀಡಿಯೋ ಮಾಡಿದ್ದಾಳೆ.
ಗ್ರಾಮದ ಸುತ್ತ ಮುತ್ತಲಿರುವ ಹಳ್ಳ ನೀರು ಹರಿಯುವ ಕಾಲುವೆಗಳು ನೀರಿಲ್ಲದೆ ಬರಡಾಗಿದ್ದು, ಕೃಷಿ ಮಾಡುವ ಜಮೀನುಗಳು ಬರಡಾಗಿದೆ. ಇದರಿಂದ ಮನುಷ್ಯರು ಅಲ್ಲದೆ ಪ್ರಾಣಿಪಕ್ಷಿಗಳ ಸಂಕುಲಕ್ಕೂ ಸಂಕಷ್ಟವಾಗಿದೆ. ನೀರು ಸಿಗದೆ ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತಿರುವುದು ಕಂಡು ಮನನೊಂದು ಪತ್ರ ಬರೆದಿದ್ದೇನೆ ಎಂದು ಬಾಲಕಿ ವರ್ಣಿಕ ಹೇಳಿದ್ದಾಳೆ.
ಪ್ರಸ್ತುತ ಕಬಿನಿ ಜಲಾಶಯವು ಭರ್ತಿಯಾಗಿ ನದಿ ಪಾತ್ರದಲ್ಲಿ ನೀರು ಹರಿಯಬಿಟ್ಟಿರುವುದರಿಂದ ಆ ನೀರನ್ನು ರಾಮಾಪುರ ಹೋಬಳಿಯತ್ತ ಹರಿಸಿದರೆ ನಿಮ್ಮನ್ನು ದೇವರಂತೆ ಕಾಣುವೆವು ಎಂದು ಹೇಳಿರುವ ವರ್ಣಿಕ ಗ್ರಾಮದ ಪರಿಸ್ಥಿತಿಯನ್ನು ಪ್ರತಿಯೊಂದು ಬರಹದಲ್ಲೂ ವಿವರಿಸಿದ್ದಾಳೆ.
ಪತ್ರದ ಕೊನೆಯಲ್ಲಿ ಗೆಳೆಯರೊಂದಿಗೆ ವಿನಯಪೂರ್ವಕವಾಗಿ ಕೈ ಜೋಡಿಸಿ ಮನವಿ ಮಾಡುವ ದೃಶ್ಯವು ಎಲ್ಲರ ಮನಕಲಕುವಂತಿದೆ.





