ಚಾಮರಾಜನಗರ | ಹಸಮಣೆ ಏರಬೇಕಿದ್ದ ವರನ ಮೇಲೆ ಚಾಕು ಇರಿತ: ನಿಗದಿಯಾಗಿದ್ದ ಮದುವೆ ರದ್ದು

ಚಾಮರಾಜನಗರ : ಹಸಮಣೆ ಏರಬೇಕಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಯತ್ನ ನಡೆಸಿದ ಪರಿಣಾಮ, ನಿಗದಿಯಾಗಿದ್ದ ಮದುವೆ ರದ್ದಾದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.
ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹ, ಗುರುವಾರ ರಾತ್ರಿ ನಡೆದ ಹಲ್ಲೆಯ ಹಿನ್ನೆಲೆ ರದ್ದಾಗಿದೆ.
ಕೊಳ್ಳೇಗಾಲ ತಾಲ್ಲೂಕಿನ ಕುಣಿಗಳ್ಳಿ ಗ್ರಾಮದ ರವೀಶ್ ಎಂಬವರು ಕಾರಿನಲ್ಲಿ ಕಲ್ಯಾಣ ಮಂಟಪದತ್ತ ಆಗಮಿಸುತ್ತಿದ್ದ ವೇಳೆ, ಎಂ.ಜಿಎಸ್.ವಿ ಕಾಲೇಜು ರಸ್ತೆಯಲ್ಲಿ 4–5 ಜನರಿದ್ದ ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ಬಂದು ದಾಳಿ ನಡೆಸಿದೆ. ಈ ವೇಳೆ ದುಷ್ಕರ್ಮಿಗಳು ವರ ರವೀಶ್‌ಗೆ ಚಾಕು ಇರಿದು ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಯ ಸಂದರ್ಭ ವರನ ಸಂಬಂಧಿಕರು ಕೂಗಿಕೊಂಡಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ರವೀಶ್ ಅವರನ್ನು ತಕ್ಷಣವೇ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಘಟನೆಯ ಹಿನ್ನೆಲೆಯಲ್ಲಿ ಶುಕ್ರವಾರ ನಡೆಯಬೇಕಿದ್ದ ವಿವಾಹವನ್ನು ರದ್ದುಗೊಳಿಸಿದ ವರನ ಪೋಷಕರು ಮತ್ತು ಕುಟುಂಬಸ್ಥರು ಮದುವೆ ಮನೆಯಿಂದ ಹಿಂದಿರುಗಿದ್ದಾರೆ.







