ಚಾಮರಾಜನಗರ: ಐದು ಹುಲಿಗಳನ್ನು ಕೊಲ್ಲಲು ಅತ್ಯಂತ ವಿಷಕಾರಿ ಕಾರ್ಬೋಫುರಾನ್ ಬಳಕೆ
ಪ್ರಯೋಗಾಲಯದ ವರದಿಯಿಂದ ದೃಢ: ಟಿ.ಹಿರಲಾಲ್

ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳನ್ನು ಕೊಲ್ಲ್ಲಲು ಅತ್ಯಂತ ವಿಷಕಾರಿ ಕೀಟನಾಶಕವನ್ನು ಬಳಸಲಾಗಿದೆ ಎಂದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೂಗ್ಯಂ ವಲಯದ ಮೀಣ್ಯಂ ಬಳಿ ಐದು ಹುಲಿಗಳನ್ನು ಕೊಲ್ಲಲು ಹಸುವಿನ ಕಳೇಬರದ ಮೇಲೆ ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಸಿಂಪಡಿಸಿದ್ದು ಪ್ರಯೋಗಾಲದ ವರದಿಯಿಂದ ದೃಡವಾಗಿರುವುದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ.
ಮೀಣ್ಯಂ ಬಳಿಯ ಗಾಜನೂರು ಸಮೀಪದ ಅರಣ್ಯದಲ್ಲಿ ತನ್ನ ಹಸುವನ್ನು ಕೊಂದಿದ್ದ ಹುಲಿಯನ್ನು ಸಾಯಿಸಲು ಹಸುವಿನ ಮಾಲಕ ಮತ್ತು ಇನ್ನಿಬ್ಬರು ಅತ್ಯಂತ ವಿಷಕಾರಿ ಕೀಟನಾಶಕ ಕಾರ್ಬೋಫುರಾನ್ ಖರೀದಿಸಿ, ಹಸುವಿನ ಕಳೆಬರದ ಮೇಲೆ ಸಿಂಪಡಿಸಿದ್ದರು. ಹಸುವನ್ನು ಕೊಂದಿದ್ದ ಹುಲಿ ತನ್ನ ಮರಿಹುಲಿಗಳೊಂದಿಗೆ ಹಸುವಿನ ಕಳೇಬರವನ್ನು ತಿನ್ನಲು ಆರಂಭಿಸುತ್ತಿದ್ದಂತೆ ಹುಲಿ ಮರಿಗಳು ಕ್ಷಣಾರ್ಧದಲ್ಲಿ ಮೃತಪಟ್ಟರೆ, ತಾಯಿ ಹುಲಿ ನರಳಾಡಿ ತುಸು ಸಮಯದ ಬಳಿ ಸಾವನ್ನಪ್ಪಿರಬಹುದೆಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಸಮೀಪದ ಕಾಡಿನೊಳಗೆ ಹಸುವಿನ ಕಳೇಬರ ತಿಂದು ಐದು ಹುಲಿಗಳು ಸಾವನ್ನಪ್ಪಿದ್ದವು, ಹುಲಿಗಳ ಸಾವಿನ ಬಗ್ಗೆ ಕಾರಣ ತಿಳಿಯಲು ಹುಲಿಗಳ ಅಂಗಾಗದ ಭಾಗವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು, ಹುಲಿಗಳ ಸಾವಿಗೆ ವಿಷಕಾರಿ ಕಾರ್ಬೋಫುರಾನ್ ಕಾರಣ ಎಂದು ತಿಳಿದುಬಂದಿದೆ. ಹಸುವಿನ ಕಳೇಬರದ ಮೇಲೆ ಕಾರ್ಬೋಫುರಾನ್ ಸಿಂಪಡಿಸಿರುವುದು ದೃಢಪಟ್ಟಿದೆ. ಇದನ್ನು ತಿಂದ ಹುಲಿಗಳು ಸಾವನ್ನಪ್ಪಿವೆ.
-ಟಿ.ಹಿರಲಾಲ್,
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಚಾಮರಾಜನಗರ ವೃತ್ತ







