ಚಾಮರಾಜನಗರ : ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್ ವಿರೂಪಗೊಳಿಸಿದ ಕಿಡಿಗೇಡಿಗಳು; ಗ್ರಾಮಸ್ಥರಿಂದ ಪ್ರತಿಭಟನೆ

ಚಾಮರಾಜನಗರ : ರಾತ್ರೋರಾತ್ರಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಫ್ಲೆಕ್ಸ್ ವಿರೂಪಗೊಳಿಸಿದ ಘಟನೆ ಜ್ಯೋತಿಗೌಡನಪುರ ಗ್ರಾಮದಲ್ಲಿ ನಡೆದಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
ಗ್ರಾಮದಲ್ಲಿ ಎರಡು ಅಂಬೇಡ್ಕರ್ ಭಾವ ಚಿತ್ರ ಇರುವ ಫ್ಲೆಕ್ಸ್ ಗಳನ್ನು ಕಿಡಿಗೇಡಿಗಳು ವಿರೂಪಗೊಳಿಸಿರುವುದೇ ಗ್ರಾಮಸ್ಥರ ಪ್ರತಿಭಟನೆಗೆ ಕಾರಣವಾಗಿದೆ.
ಜೋತಿಗೌಡನಪುರ ಗ್ರಾಮದ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರ ಇರುವ ಫ್ಲೆಕ್ಸ್ ಅಳವಡಿಸಲಾಗಿತ್ತು. ಗುರುವಾರ ರಾತ್ರಿ ಕಿಡಿಗೇಡಿಗಳು ಅಂಬೇಡ್ಕರ್ ಮುಖದ ಭಾಗವನ್ನು ಬ್ಲೇಡ್ ನಿಂದ ಹರಿದಿರುವ ಪ್ರಕರಣ ಬೆಳಗ್ಗೆ ಬೆಳಕಿಗೆ ಬಂದಿದೆ. ಇದೀಗ ಗ್ರಾಮದಲ್ಲಿ ದಲಿತ ಸಮುದಾಯದವರು ಧರಣಿ ನಡೆಸುತ್ತಿದ್ದಾರೆ.
ಅಂಬೇಡ್ಕರ್ ಭಾವಚಿತ್ರಗಳನ್ನು ವಿರೂಪಗೊಳಿಸಿ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಕವಿತಾ ರವರು ಪೊಲೀಸ್ ಸಿಬ್ಬಂದಿಗಳೊಂದಿಗೆ ಗ್ರಾಮಕ್ಕೆ ತೆರಳಿ ಸ್ಥಳ ಪರಿಶೀಲಿಸಿ, ಕಿಡಿಗೇಡಿಗಳ ಪತ್ತೆಗೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಧರಣಿ ಮುಂದುವರೆಸಿದ್ದಾರೆ.





