Chamarajanagar | ಶೂಶೌಟ್ ಪ್ರಕರಣ : ಹನೂರು ಪೊಲೀಸ್ ಠಾಣೆ ಮುಂದೆ ಗ್ರಾಮಸ್ಥರಿಂದ ಪ್ರತಿಭಟನೆ

ಅರಣ್ಯ ಇಲಾಖೆ ಕಛೇರಿಗೆ ಪೊಲೀಸ್ ಸರ್ಪಗಾವಲು
ಚಾಮರಾಜನಗರ/ಹನೂರು : ಶಾಗ್ಯ ಗ್ರಾಮದ ಸಮೀಪದ ಮರಿಮಂಗಲ ಬೀಟ್ ಬಳಿ ಅರಣ್ಯ ಸಿಬ್ಬಂದಿ ಶನಿವಾರ ಮುಂಜಾನೆ ಬೇಟೆಗೆ ಬಂದಿದ್ದರೆನ್ನಲಾದವರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ತೊಮಿಯರ್ ಪಾಳ್ಯದ ಮೂವರು ಸಾವನ್ನಪ್ಪಿದ್ದ ಘಟನೆಯನ್ನು ಖಂಡಿಸಿದ ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಹನೂರು ಪೊಲೀಸ್ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಹನೂರು ಪಟ್ಟಣದಲ್ಲಿರುವ ಪೊಲೀಸ್ ಠಾಣೆಯ ಮುಂದೆ ತೊಮಿಯರ್ ಪಾಳ್ಯ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿ, ತೊಮಿಯರ್ ಪಾಳ್ಯದ ಅಮಾಯಕರ ಮೇಲೆ ಅರಣ್ಯ ಸಿಬ್ಬಂದಿ ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ, ಗುಂಡು ಹೊಡೆದವರನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಪೊಲೀಸ್ ಅಧಿಕಾರಿಗಳ ಮುಂದೆ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಪೊಲೀಸ್ ಠಾಣೆಯ ಸಮೀಪವೇ ಇರುವ ಅರಣ್ಯ ಇಲಾಖೆಯ ಕಛೇರಿಗೆ ಪೊಲೀಸ್ ಸರ್ಪ ಕಾವಲು ಹಾಕಲಾಗಿದೆ. ಪ್ರಸ್ತುತ ಹನೂರು ಪಟ್ಟಣ ಬಿಗುವಿನ ವಾತಾವರಣದಿಂದ ಕೂಡಿದೆ.
Next Story






