ಚಾಮರಾಜನಗರ | ವೃದ್ಧನನ್ನು ಕುಟುಂಬದವರೊಂದಿಗೆ ಸೇರಿಸಲು ನೆರವಾದ ಸಾಮಾಜಿಕ ಜಾಲತಾಣ

ಚಾಮರಾಜನಗರ, ಜ.2: ಸಾವಿರಾರು ಕಿಲೋ ಮೀಟರ್ ದೂರದೂರಿನಿಂದ ಬಂದು ತವರಿಗೆ ಮರಳಲಾಗದೇ ನಿರ್ಗತಿಕ ಪುನರ್ವಸತಿ ಕೇಂದ್ರದಲ್ಲಿದ್ದ ವೃದ್ದರೊಬರನ್ನು ಸಾಮಾಜಿಕ ಜಾಲತಾಣದ ಮೂಲಕ ಕುಟುಂಬದವರೊಡನೆ ಒಂದುಗೂಡಿಸಿದ ಅಪರೂಪ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.
ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಅಮರ್ ಪುರ್ ತಾಲೂಕಿನ ಧನ್ವಾಸಿ ಗ್ರಾಮದ ನಿವಾಸಿ ಪ್ರೀತಂ ಸಿಂಗ್(60), ಕೆಲವು ತಿಂಗಳ ಹಿಂದೆ ಕುಟುಂಬಸ್ಥರೊಂದಿಗೆ ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದರು. ಆದರೆ ಕುಟುಂಬದವರಿಂದ ಅಚಾನಕ್ ಆಗಿ ಬೇರೆಯಾದರು. ಹಿಂದಿ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಮನೆಯವರ ನಂಬರ್ ಗೊತ್ತಿಲ್ಲ. ವಾಪಸ್ ಹೋಗಲು ತಿಳಿಯುತ್ತಿಲ್ಲ, ಬಸ್ ಟಿಕೆಟ್ಗೆ ಹಣವೂ ಇಲ್ಲದೆ, ಮನೆಯವರ ಪಾಲಿಗೆ ನಾಪತ್ತೆಯಾಗಿ ಯಳಂದೂರು ಬಸ್ ನಿಲ್ದಾಣದ ಸುತ್ತಮುತ್ತ ಓಡಾಡುತ್ತ, ರಾತ್ರಿ ವೇಳೆ ರಸ್ತೆ ಬದಿ ಮಲಗಿಕೊಂಡು ದಿನಗಳನ್ನು ಕಳೆಯುತ್ತಿದ್ದರು. ನಿರ್ಗತಿಕ ವೃದ್ಧನನ್ನು ಗಮನಿಸಿದ ಯಳಂದೂರು ಠಾಣೆ ಪೊಲೀಸರು ನ.11ರಂದು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು.
ಎರಡು ತಿಂಗಳು ವೃದ್ಧಾಶ್ರಮದಲ್ಲಿದ್ದ ಪ್ರೀತಂ ಸಿಂಗ್ ಊರು, ಮನೆಯವರ ಬಗ್ಗೆ ಹಿಂದಿಯಲ್ಲಿ ಹೇಳಿಕೊಂಡು ಪೇಚಾಡುತ್ತಿದ್ದರು. ಸರಿಯಾಗಿ ಊರಿನ ಹೆಸರು ಹೇಳುತ್ತಿದ್ದಾರಾ ಎನ್ನುವ ಗೊಂದಲ ಮೂಡಿತ್ತು. ವೃದ್ಧಾಶ್ರಮದ ಅಧೀಕ್ಷಕ ಎಂ.ಮಹದೇವಸ್ವಾಮಿ, ಸಾಮಾಜ ಸೇವಕ ಎಚ್.ಬಿ.ಪ್ರಕಾಶ್ಗೆ ಪ್ರೀತಂ ಸಿಂಗ್ನನ್ನು ಕುಟುಂಬದ ಮಡಿಲು ಸೇರಿಸಬೇಕೆಂಬ ಆಸೆ ಇತ್ತು. ಈ ಸಂದರ್ಭದಲ್ಲಿ ವೃದ್ದಾಶ್ರಮದಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಬಂದಿದ್ದ ಸತ್ಯ ಎಜುಕೇರ್ ಕಾಂಪೆಟೆನ್ಸಿ ಟ್ರಸ್ಟ್ನ ಮಹೇಶ್ ಪ್ರೀತಂ ಸಿಂಗ್ ಅವರ ವೀಡಿಯೊ ಮಾಡಿದರು. ಇನ್ಸ್ಟಾಗ್ರಾಂನಲ್ಲಿರುವ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್ಗೆ ಈ ವಿಡಿಯೋವನ್ನು ಹಾಕಿ ಸಹಾಯ ಕೋರಿದರು. ದಿಂಡೋರಿ ಗ್ರೂಪ್ ನ ಅಡ್ಮಿನ್ ಪ್ರೀತಂ ಸಿಂಗ್ ಕುಟುಂಬಕ್ಕೆ ವಿಷಯ ತಿಳಿಸಿ ಮಹೇಶ್ಗೆ ಅವರ ಸಂಪರ್ಕ ಸಂಖ್ಯೆಯನ್ನು ಕೊಟ್ಟರು.
ಇನ್ಸ್ಟಾಗ್ರಾಂನಿಂದ ಸಿಕ್ಕ ಮಾಹಿತಿ ಆಧರಿಸಿ 2025 ರ ಡಿ.30ರಂದು ವೃದ್ಧ ಪ್ರೀತಂ ಸಿಂಗ್ ಪುತ್ರ ರಾಜೇಶ್ ಸಿಂಗ್ ಧುರ್ವಿ ಬಂದರು. ಕಾನೂನು ನಿಯಮಾವಳಿ ಪ್ರಕಾರ, ಪ್ರೀತಂ ಸಿಂಗ್ ಅನ್ನು ಚಾಮರಾಜನಗರ ಜಿಲ್ಲೆಯ ಯಳಂದೂರು ಪೊಲೀಸರ ಮೂಲಕ ಪುತ್ರನ ಒಪ್ಪಿಸಲಾಯಿತು.







