ಚಾಮರಾಜನಗರ | ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಇಮ್ಮಡಿ ಮಹದೇವಸ್ವಾಮಿಯ ಮರಣ ದಂಡನೆಗೆ ಆಗ್ರಹಿಸಿ ಪ್ರತಿಭಟನೆ

ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಹಂಚಿ 17 ಮಂದಿಯ ಸಾವಿಗೆ ಕಾರಣರಾದ ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಬಾರದು ಹಾಗೂ ಅವರಿಗೆ ಮರಣ ದಂಡನೆ ವಿಧಿಸಬೇಕು ಎಂದು ಒತ್ತಾಯಿಸಿ, ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಮಠದ ಮುಂಭಾಗ ಸಂತ್ರಸ್ಥ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
ಚಾಮರಾಜನಗರ ಜಿಲ್ಲೆ, ಹನೂರು ತಾಲೂಕು, ಮಾರ್ಟಳ್ಳಿ ಸಮೀಪದ ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದಲ್ಲಿ, ಕಳೆದ ಆರು ವರ್ಷಗಳ ಹಿಂದೆ ನಡೆದ ವಿಷ ಮಿಶ್ರಿತ ಪ್ರಸಾದ ಹಂಚಿಕೆಯ ಪರಿಣಾಮ 17 ಮಂದಿ ಸಾವನ್ನಪ್ಪಿದ್ದರು ಮತ್ತು ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ಈಗಲೂ ಅನೇಕ ಮಂದಿ ವಿವಿಧ ಖಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸಂತ್ರಸ್ಥ ಕುಟುಂಬಸ್ಥರು ಸಾಲೂರು ಮಠದ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಆರೋಪಿ ಇಮ್ಮಡಿ ಮಹದೇವಸ್ವಾಮಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದರೆ ಪ್ರಕರಣದ ಸಾಕ್ಷ್ಯ ನಾಶವಾಗುವ ಭೀತಿ ಇದೆ. ಹಾಗಾಗಿ ಅವರನ್ನು ಯಾವುದೇ ಕಾರಣಕ್ಕೂ ಮಹದೇಶ್ವರ ಬೆಟ್ಟಕ್ಕೆ ಬರಲು ಬಿಡಬಾರದು ಹಾಗೂ ಆರೋಪಿಗೆ ಮರಣ ದಂಡನೆ ವಿಧಿಸಬೇಕೆಂದು ಆಹಗ್ರಹಿಸಿ ಸಂತ್ರಸ್ಥ ಕುಟುಂಬಸ್ಥರು ಮಹದೇಶ್ವರ ಬೆಟ್ಟದ ಪೊಲೀಸರಿಗೆ ಮನವಿ ಪತ್ರ ಸಲ್ಲಿಸಿದರು.





