Chamarajanagar | ನಂಜೇದೇವನಪುರ ಬಳಿ ಹುಲಿ ಮರಿ ಸೆರೆ

ಚಾಮರಾಜನಗರ : ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಬಳಿ ಕಾಣಿಸಿಕೊಂಡಿದ್ದ ಐದು ಹುಲಿಗಳ ಪೈಕಿ ಈ ಹಿಂದೆ ತಾಯಿ ಹುಲಿ ಸೆರೆಯಾಗಿತ್ತು, ಇದೀಗ 10 ತಿಂಗಳ ಹುಲಿ ಮರಿ ಸೆರೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿಯ ನಂಜೇದೇವನಪುರ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಒಂದು ತಾಯಿ ಹುಲಿ ಹಾಗೂ 4 ಹುಲಿ ಮರಿಗಳನ್ನು ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು, ಬೆಂಗಳೂರು ಇವರು ಅನುಮತಿಯನ್ನು ನೀಡಿದ್ದರು.
ಅರಣ್ಯಾಧಿಕಾರಿಗಳ ಸೂಚನೆಯಂತೆ ಜನವರಿ 9 ರಂದು ತಾಯಿ ಹುಲಿಯನ್ನು ಕಾರ್ಯಾಚರಣೆ ಮೂಲಕ ಸೆರೆಹಿಡಿಯಲಾಗಿದ್ದು, 4 ಹುಲಿ ಮರಿಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಯು ಮುಂದುವರೆಸಲಾಗಿತ್ತು. 4 ಹುಲಿ ಮರಿಗಳ ಪೈಕಿ ತಡರಾತ್ರಿ 10 ತಿಂಗಳ ಒಂದು ಹೆಣ್ಣು ಹುಲಿ ಮರಿಯನ್ನುಸೆರೆಹಿಡಿಯಲಾಗಿದೆ.
ಸೆರೆ ಹಿಡಿದಿರುವ ಹುಲಿಯನ್ನು ಸುರಕ್ಷಿತವಾಗಿ ಇಡಲಾಗಿದೆ ಹಾಗೂ ಅದರ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಇನ್ನು ಉಳಿದ 3 ಹುಲಿಮರಿಗಳ ಸೆರೆ ಕಾರ್ಯಾಚರಣೆ ಮುಂದುವರೆಸಲಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಇಬ್ಬರು ಇಲಾಖೆಯ ಪಶು ವೈದ್ಯಾಧಿಕಾರಿಗಳು, ದುಬಾರೆ ಕ್ಯಾಂಪಿನ 4 ಸಾಕಾನೆ, ಇಲಾಖೆಯ ಡ್ರೋನ್ ತಂಡಗಳು ಮತ್ತು ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.







