ಚಾಮರಾಜನಗರ | ಹುಲಿ ಹತ್ಯೆ ಆರೋಪಿ ಬೇಬಿ ವೀರಪ್ಪನ್ ಬಂಧನ

ಚಾಮರಾಜನಗರ: ಹುಲಿ ಹತ್ಯೆಗೈದು ಕಳೇಬರವನ್ನು ಹೂತಿಟ್ಟು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬುಧವಾರ ರಾತ್ರಿ ಮೈಸೂರಿನಲ್ಲಿ ಬಂಧಿಸಿದ್ದಾರೆ.
ಆರೋಪಿ ಗಂಗನದೊಡ್ಡಿ ಗ್ರಾಮದ ಗೋವಿಂದ ಅಲಿಯಾಸ್ ಬೇಬಿ ವೀರಪ್ಪನ್ ಬಂಧಿತ ಆರೋಪಿ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದ ಪಚ್ಚೆದೊಡ್ಡಿ ಬಳಿ 2025ರ ಅಕ್ಟೋಬರ್ 2ರಂದು ಹುಲಿಯೊಂದನ್ನು ಹತ್ಯೆ ಮಾಡಿ ಅದನ್ನು ಮೂರು ಭಾಗಗಳಾಗಿ ಕತ್ತರಿಸಿ ಮಣ್ಣಿನಲ್ಲಿ ಹೂತಿಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ಗೋವಿಂದ ಅಲಿಯಾಸ್ ಬೇಬಿ ವೀರಪ್ಪನ್ ನನ್ನು ಕಳೆದ ಅಕ್ಟೋಬರ್ 26ರಂದು ಹನೂರು ತಾಲೂಕಿನ ನಾಲ್ ರೋಡ್ ಬಳಿ ಅರಣ್ಯಾಧಿಕಾರಿಗಳು ಬಂಧಿಸಲು ಮುಂದಾದಾಗ ಕ್ಷಣಮಾತ್ರದಲ್ಲಿ ತಪ್ಪಸಿಕೊಂಡು ತಲೆಮರೆಸಿಕೊಂಡಿದ್ದನ್ನು. ಅಲ್ಲದೇ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಆದರೆ ನ್ಯಾಯಾಲಯವು ನಿರೀಕ್ಷಣಾ ಜಾಮೀನಿನ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಆರೋಪಿ ಗೋವಿಂದ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದನು. ಈ ನಡುವೆ ಆತನ ಬಂಧನವಾಗಿದೆ.
ಈ ಹುಲಿ ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳಾಗಿದ್ದು, ಗೋವಿಂದನ ಬಂಧನದೊಂದಿಗೆ ಎಲ್ಲರನ್ನು ಬಂಧಿಸಿದಂತಾಗಿದೆ ಎಂದು ಮಲೆ ಮಹೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.





