ಚಾಮರಾಜನಗರ : ಆರು ತಿಂಗಳ ಚಿರತೆ ಮರಿಯನ್ನು ಸೆರೆ ಹಿಡಿದ ಗ್ರಾಮಸ್ಥರು

ಚಾಮರಾಜನಗರ : ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಸೀರಗೊಡು ಗ್ರಾಮದ ರೈತರೊಬ್ಬರು ತನ್ನ ಆಡಿನ ಮರಿಯನ್ನು ಮೇಯಲು ಬಿಟ್ಟಿದ್ದರು. ಆದರೆ ಬಹಳ ಸಮಯವಾದರೂ ಆಡಿನ ಮರಿ ಬಾರದ ಹಿನ್ನಲೆ ಹುಡುಕಲು ತೆರಳಿದ್ದ ರೈತನಿಗೆ ಅದು ಚಿರತೆಯ ದಾಳಿಗೆ ಮೃತಪಟ್ಟಿರುವುದು ಗೊತ್ತಾಗಿದೆ. ಈ ಸಂದರ್ಭದಲ್ಲೇ ಸಮೀಪದ ಮರದ ಮೇಲೆ ಚಿರತೆ ಮರಿ ಇರುವುದನ್ನು ರೈತ ಗಮನಿಸಿದ್ದಾರೆ.
ಮರದ ಮೇಲೆ ಚಿರತೆ ಮರಿ ಕಂಡುಬಂದ ಹಿನ್ನೆಲೆಯಲ್ಲಿ ತಾಯಿ ಚಿರತೆ ತನ್ನ ಮರಿಯನ್ನು ಬಿಟ್ಟು ತೆರಳಿರುವ ಸಾಧ್ಯತೆ ಇದೆ ಎಂದು ಅಂದಾಜಿಸಿದ ಗ್ರಾಮಸ್ಥರು, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡಿದ್ದರು.
ಸುಮಾರು ಎರಡು ಗಂಟೆಗಳ ಬಳಿಕ ಚಿರತೆ ಮರಿ ಮರದಿಂದ ಕೆಳಗೆ ಇಳಿದಾಗ ಗ್ರಾಮಸ್ಥರು ಹರಸಾಹಸಪಟ್ಟು ಅದನ್ನು ಯಾವುದೇ ಅಪಾಯವಾಗದಂತೆ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದರು.







