Hanuru | ಅರಣ್ಯ ಇಲಾಖೆಯ ಕಳ್ಳಬೇಟೆ ತಡೆ ಶಿಬಿರದಲ್ಲಿ ಜಿಲೆಟಿನ್ ಬಳಸಿ ಸ್ಫೋಟ?

ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್ ನಲ್ಲಿ ಶೂಟೌಟ್ ಪ್ರಕರಣದ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಕಾವೆರಿ ವನ್ಯಜೀವಿ ಧಾಮದ ಕೊತ್ತನೂರು ವಲಯದ ಮತ್ತೀಪುರ ಶಾಖೆಯಲ್ಲಿರುವ ಮಿಂಚನಾರಳ್ಳ ಕಳ್ಳಬೇಟೆ ತಡೆ ಶಿಬಿರದಲ್ಲಿ ಜಿಲೆಟಿನ್ ಸ್ಫೋಟ ಸಂಭವಿಸಿರುವುದು ಇದೀಗ ಬಹಿರಂಗವಾಗಿದೆ.
ಕಾವೆರಿ ವನ್ಯಜೀವಿ ಧಾಮದ ಕೊತ್ತನೂರು ವಲಯದ ಮತ್ತೀಪುರ ಶಾಖೆಯಲ್ಲಿರುವ ಮಿಂಚನಾರಳ್ಳ ಕಳ್ಳಬೇಟೆ ತಡೆ ಶಿಬಿರದಲ್ಲಿ ಕಿಡಿಗೇಡಿಗಳು ಜಿಲೆಟಿನ್ ಬಳಸಿ ಸ್ಫೋಟ ನಡೆಸಿದ್ದಾರೆ ಎನ್ನಲಾಗಿದೆ.
ಶೂಟೌಟ್ ಪ್ರಕರಣದ ಹಿನ್ನೆಲೆಯಲ್ಲಿ ಕಾವೇರಿ ವನ್ಯಧಾಮದಲ್ಲಿ ಈಗಾಗಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಶಿಬಿರವೊಂದರಲ್ಲಿ ಸ್ಫೋಟ ನಡೆದಿರುವುದು ಅರಣ್ಯ ಸಿಬ್ಬಂದಿ ಹಾಗೂ ಶಿಬಿರಗಳ ಭದ್ರತೆ ಕುರಿತು ಆತಂಕ ಹೆಚ್ಚಿಸಿದೆ.
ಘಟನೆ ಕುರಿತು ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ ಮಾಹಿತಿ ನೀಡಿದ್ದು, ಸ್ಫೋಟದ ಸ್ವರೂಪ, ಕಾರಣ ಹಾಗೂ ಘಟನೆಯ ಹಿಂದಿರುವವರ ಬಗ್ಗೆ ತನಿಖೆ ನಡೆಯಬೇಕಿದೆ. ಶೂಟೌಟ್ ಮತ್ತು ಜಿಲೆಟಿನ್ ಸ್ಫೋಟ ಘಟನೆಗಳಿಗೆ ಯಾವುದಾದರೂ ಸಂಬಂಧವಿದೆಯೇ ಎಂಬುದೂ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ ಎಂದವರು ತಿಳಿಸಿದ್ದಾರೆ.






