Gundlupete | ಗಣಿಯಲ್ಲಿನ ನೀರಿನಲ್ಲಿ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತ್ತಿರುವ ಮಡಹಳ್ಳಿ ಗ್ರಾಮದ ಗುಮ್ಮಕಲ್ಲು ಗುಡ್ಡದ ಬಿಳಿಕಲ್ಲು ಗಣಿಯಲ್ಲಿನ ನೀರಿನಲ್ಲಿ ಹಂಗಳ ಗ್ರಾಮದ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಡಹಳ್ಳಿ ಬಳಿಯ ನಿಷೇದಿತ ಬಿಳಿಕಲ್ಲು ಗಣಿಯಲ್ಲಿ ಸೋಮವಾರ ಬೆಳಗ್ಗೆ ಧನಗಾಯಿಗಳು ಜಾನುವಾರು ಮೇಯಿಸಲು ಬಂದಾಗ ಕ್ವಾರಿಯ ನೀರಿನಲ್ಲಿ ಮೃತದೇಹ ಇರುವುದನ್ನು ಕಂಡು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.
ಗುಮ್ಮಕಲ್ಲು ಗುಡ್ಡದ ಗಣಿಯಲ್ಲಿನ ನೀರಿನಲ್ಲಿ ವ್ಯಕ್ತಿಯ ಶವ ದೊರೆತ್ತಿರುವುದನ್ನು ಕಾಣಲು ಸುತ್ತಮುತ್ತಲಿನ ನೂರಾರು ಜನರು ಆಗಮಿಸಿದ್ದರು.
ಬಿಳಿಕಲ್ಲು ಗಣಿಯಲ್ಲಿನ ನೀರಿನಲ್ಲಿ ಬೋರಲಾಗಿ ತೇಲುತ್ತಿದ್ದ ಮೃತದೇಹದ ಬೆನ್ನಿನಲ್ಲಿ ಗಾಯದ ಗುರುತು ಇದ್ದು, ಮೃತ ವ್ಯಕ್ತಿಯನ್ನು ಹಂಗಳ ಗ್ರಾಮದ ಮಂಜು ಬಿನ್ ಚಿಕ್ಕ ಬಸಪ್ಪ (50) ವರ್ಷ ಎಂದು ಗುರುತಿಸಲಾಗಿದ್ದು, ನರ್ಸರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಳೆದ 15-20 ದಿನಗಳಿಂದ ಕೆಲಸಕ್ಕೆ ತೆರಳಿರಲಿಲ್ಲ ಎನ್ನಲಾಗಿದ್ದು, ಬಹಿರ್ದೆಸೆಗೆ ತೆರಳಿದಾಗ ಕಾಲು ಜಾರಿ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.
ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಿಸಿ ಪೊಲೀಸ್ ಇನ್ಸ್ಪೆಕ್ಟರ್ ಜಯಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.






