ಹನೂರು ಶೂಟೌಟ್ ಪ್ರಕರಣ | ಅರಣ್ಯ ಇಲಾಖೆಯಿಂದ ದೊಡ್ಡ ತಪ್ಪಾಗಿದೆ : ಸಚಿವ ಪುಟ್ಟರಂಗಶೆಟ್ಟಿ

ಮೈಸೂರು : ʼಶೂಟೌಟ್ ಮಾಡಿದ ಮೇಲೆ ಯಾಕೆ ಮೃತದೇಹಗಳನ್ನು ಮೈಸೂರಿಗೆ ತಂದರೂ ಎಂದು ನನಗೂ ಗೊತ್ತಿಲ್ಲ. ಒಟ್ಟಿನಲ್ಲಿ ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆʼ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶಾಗ್ಯಂ ಬಳಿಯ ಮರಿಮಂಗಲ ಗ್ರಾಮದ ಮೂವರನ್ನು ಅರಣ್ಯ ಇಲಾಖೆಯವರು ಶೂಟೌಟ್ ಮಾಡಿದ್ದು, ಮೃತರ ದೇಹದ ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿದ್ದು, ಮೃತದೇಹಗಳನ್ನು ಶನಿವಾರ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅರಣ್ಯ ಇಲಾಖೆಯಿಂದ ಬಹಳ ದೊಡ್ಡ ತಪ್ಪು ಆಗಿದೆ. ಪ್ರಕರಣದ ಬಗ್ಗೆ ಅರಣ್ಯ ಇಲಾಖೆ ನನಗೆ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಒಬ್ಬೊಬ್ಬ ಅಧಿಕಾರಿ ಒಂದೊಂದು ರೀತಿ ನಮಗೆ ಸುಳ್ಳು ಹೇಳುತ್ತಿದ್ದಾರೆ. ನನಗೆ ಇಡೀ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಬೇಟೆಯಾಡಿಕೊಂಡು ವಾಪಸ್ ಬರುವಾಗ ಗುಂಡು ಹೊಡೆದರು ಎಂದು ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಇದನ್ನು ನಂಬುವ ಸ್ಥಿತಿಯಲ್ಲಿ ನಾನು ಇಲ್ಲ. ಎನ್ ಕೌಂಟರ್ ಮಾಡಿದ ಮೇಲೆ ಮೃತ ದೇಹ ಯಾಕೆ ಅಲ್ಲಿಂದ ಮೈಸೂರಿಗೆ ಶಿಫ್ಟ್ ಮಾಡಿದರು. ಯಾರನ್ನು ಕೇಳದೆ ಮೈಸೂರಿಗೆ ಮೃತದೇಹ ಏಕೆ ಬಂತು. ನನಗೆ ಅರಣ್ಯ ಇಲಾಖೆಯವರು ಹೇಳುತ್ತಿರುವುದು ಸುಳ್ಳು. ನನಗೆ ಈ ಪ್ರಕರಣದ ಬಗ್ಗೆ ಹಲವು ಸಂಶಯಗಳು ಇದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ ಎಂದು ಹೇಳಿದರು.
ಮೃತಪಟ್ಟಿರುವವರು ಬೇಟೆಗಾರರು ಎಂದು ನನಗೆ ಅನಿಸುವುದಿಲ್ಲಾ. ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಪ್ರಕರಣದಿಂದ ಸರಕಾರಕ್ಕೂ ಮುಜುಗರ ಆಗಿದೆ. ಪ್ರಕರಣದ ಬಗ್ಗೆ ಇನ್ನು ಯಾರು ದೂರು ಕೊಟ್ಟಿಲ್ಲ. ಎಫ್.ಐ.ಆರ್ ಆಗದೆ ಮರಣೋತ್ತರ ಪರೀಕ್ಷೆ ಆಗಲ್ಲ ಎಂದು ಹೇಳಿದರು.






