ಹನೂರು ಶೂಟೌಟ್ ಪ್ರಕರಣ: ತೀರಾ ಸನಿಹದಿಂದ ಗುಂಡು ಹಾರಿಸಿರುವುದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ದೃಢ

ಮೃತರು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ್ದ ಶೂಟೌಟ್ನಲ್ಲಿ ಮೂವರು ಗ್ರಾಮಸ್ಥರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಮರಣೋತ್ತರ ಪರೀಕ್ಷಾ ವರದಿಗಳು ಬಹಿರಂಗಗೊಂಡಿವೆ. ವರದಿಯಲ್ಲಿ ತೀರಾ ಹತ್ತಿರದಿಂದಲೇ (ಕ್ಲೋಸ್ರೇಂಜ್) ಗುಂಡು ಹಾರಿಸಿರುವ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ.
ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ನ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಶೂಟೌಟ್ನಲ್ಲಿ ತೋಮಿಯಾರ್ ಪಾಳ್ಯದ ಕುಮಾರ್ ಹಾಗೂ ಮರಿಯಮಂಗಲದ ಅಂತೋಣಿ ಸ್ವಾಮಿ ಮತ್ತು ಪೀಟರ್ ಸಾವನ್ನಪ್ಪಿದ್ದರು. ಇವರ ಶವಪರೀಕ್ಷಾ ವರದಿಯನ್ನು ಬಹಿರಂಗಪಡಿಸಲಾಗಿದೆ.
ಕುಮಾರ್ ಅವರ ಎದೆ ಹಾಗೂ ಬಲ ತೊಡೆಗೆ ತೀರಾ ಹತ್ತಿರದಿಂದ ಗುಂಡು ಹಾರಿಸಲಾಗಿದೆ. ಕುಮಾರ್ ಒಳ ಉಡುಪಿನಲ್ಲಿ ಹೆಡ್ ಟಾರ್ಚ್, ಬೆಂಕಿಪೊಟ್ಟಣ ಹಾಗೂ ಬೀಡಿ ಪತ್ತೆಯಾಗಿದೆಯೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂತೋಣಿ ಸ್ವಾಮಿಯ ಎದೆ ಮತ್ತು ಕುತ್ತಿಗೆಯ ಭಾಗಕ್ಕೆ ಗುಂಡು ತಗಲಿದೆ. ಗಮನಾರ್ಹವಾಗಿ, ಅಂತೋಣಿ ಸ್ವಾಮಿಯ ಒಳ ಉಡುಪಿನಲ್ಲಿ ನಾಡಬಂದೂಕಿಗೆ ಮದ್ದು ತುಂಬಲು ಬಳಸುವ 9 ಅಲ್ಯೂಮಿನಿಯಂ ಪ್ರೈಮರ್ಗಳು ಪತ್ತೆಯಾಗಿವೆ ಎಂದು ವರದಿ ಹೇಳಿದೆ.
ಪೀಟರ್ ಅವರ ಎದೆ, ಕುತ್ತಿಗೆ ಹಾಗೂ ತೊಡೆಯ ಭಾಗಕ್ಕೆ ತೀರಾ ಸಮೀಪದಿಂದಲೇ ಗುಂಡು ಹಾರಿಸಲಾಗಿರುವುದು ವರದಿಯಲ್ಲಿ ದೃಢಪಟ್ಟಿದೆ.
ಕುಟುಂಬಸ್ಥರ ಪ್ರತಿಭಟನೆ ಹಾಗೂ ಪರಿಹಾರ:
ಆ. 16ರಂದು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮೂವರ ಶವಪರೀಕ್ಷೆ ನಡೆಸಲಾಗಿತ್ತು. ಆದರೆ, ವರದಿಯನ್ನು ಒಪ್ಪಲು ನಿರಾಕರಿಸಿದ ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಪಟ್ಟುಹಿಡಿದು ತೀವ್ರ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಅಧಿಕಾರಿಗಳು ಮನವೊಲಿಸಿ, ಪರಿಹಾರ ಘೋಷಿಸಿದ ಬಳಿಕವಷ್ಟೇ ಪ್ರತಿಭಟನೆ ಹಿಂಪಡೆಯಲಾಯಿತು.
12 ಅರಣ್ಯ ಸಿಬ್ಬಂದಿ ವಿಚಾರಣೆ:
ಘಟನೆಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಅಂದು ಸ್ಥಳದಲ್ಲಿದ್ದ ಹೊಳೆಮುರಿದಟ್ಟಿ ಹಾಗೂ ಬೇಟೆಗಾರರ ಗುಡ್ಡ ಎಪಿಸಿ ಕ್ಯಾಂಪ್ಗಳ ಒಟ್ಟು 12 ಮಂದಿ ಅರಣ್ಯ ಸಿಬ್ಬಂದಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಪ್ರಕರಣಕ್ಕೊಬ್ಬನೇ ಪ್ರತ್ಯಕ್ಷದರ್ಶಿ:
ಶೂಟೌಟ್ ನಡೆಯುವಾಗ ಸ್ಥಳದಲ್ಲಿದ್ದು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದ ಮರಿಯಮಂಗಲದ ಮಹಿಮಾದಾಸ್ ಈ ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿಯಾಗಿದ್ದಾನೆ. ಅರಣ್ಯ ಇಲಾಖೆಯ ಪ್ರಕಾರ ಈತ ಪ್ರಕರಣದ 4ನೇ ಆರೋಪಿಯಾಗಿದ್ದರೆ, ಪೊಲೀಸರ ಕೊಲೆ ತನಿಖೆಯ ಪಾಲಿಗೆ ಈತನೇ ಪ್ರಮುಖ ಸಾಕ್ಷಿಯಾಗಿದ್ದಾನೆ. ತನಿಖಾಧಿಕಾರಿಗಳು ಈಗಾಗಲೇ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.






