ಹನೂರು | ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು

ಸಾಂದರ್ಭಿಕ ಚಿತ್ರ
ಚಾಮರಾಜನಗರ : ಇಲ್ಲಿನ ಹನೂರು ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಇಬ್ಬರು ಯುವಕರು ಈಜಲು ಹೋಗಿ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ರವಿವಾರ ಸಂಜೆ ನಡೆದಿದೆ.
ಮೃತರಾದವರನ್ನು ಪಿಜಿ ಪಾಳ್ಯ ಗ್ರಾಮದ ಚಾಮರಾಜು (25) ಹಾಗೂ ಆಕಾಶ್ (22) ಎಂದು ಗುರುತಿಸಲಾಗಿದೆ. ಚಾಮರಾಜು ಬೆಂಗಳೂರಿನಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದರೆ, ಆಕಾಶ್ ಕೂಡ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸಮಾಡುತ್ತಿದ್ದರು.
ರವಿವಾರ ಸಂಬಂಧಿಕರ ಗೃಹಪ್ರವೇಶದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಇಬ್ಬರೂ, ಕಾರ್ಯಕ್ರಮ ಮುಗಿದ ನಂತರ ಆನೆಗುಂದಿ ಗ್ರಾಮದ ದೊಡ್ಡಪ್ಪ ಕೆಂಪರಾಜು ಅವರ ಜಮೀನಿನಲ್ಲಿ ಇರುವ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದರು. ಈಜುವ ವೇಳೆ ನೀರಿನಲ್ಲಿ ಮುಳುಗಿ, ಮೇಲಕ್ಕೆ ಬಾರಲಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ
ಘಟನೆಯ ಮಾಹಿತಿ ಪಡೆದ ಹನೂರು ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ವಶಕ್ಕೆ ಪಡೆದು ಹನೂರು ಪಟ್ಟಣದ ಶವಗಾರಕ್ಕೆ ರವಾನಿಸಿದ್ದಾರೆ.
Next Story