ಶೂಟೌಟ್ ಪ್ರಕರಣ: ಪಿಯುಸಿಎಲ್‌ನಿಂದ ಸತ್ಯ ಶೋಧನೆ ವರದಿ ಬಿಡುಗಡೆ

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಮರಿಯಮಂಗಲ ಬೀಟ್‌ನಲ್ಲಿ ನಡೆದಿರುವ ಶೂಟೌಟ್ ಪ್ರಕರಣದ ನೈಜತೆ ಅರಿಯಲು ಪಿಯುಸಿಎಲ್ ಜಿಲ್ಲಾ ಘಟಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ಹಂತದ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 9 ಪ್ರಶ್ನೆ ಹಾಗೂ 5 ಆಗ್ರಹಗಳನ್ನು ಒಳಗೊಂಡಿದೆ.
ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಯುಸಿಎಲ್ ಜಿಲ್ಲಾ ಘಟಕದ ಪದಾಧಿಕಾರಿಗಳು, ಆ.21ರಂದು ಹನೂರು ತಾಲೂಕಿನ ಲಾಜಾರ್ ದೊಡ್ಡಿ, ಜಗನ್ನಾಥದೊಡ್ಡಿ ಮತ್ತು ಮರಿಯಮಂಗಲಕ್ಕೆ ಭೇಟಿ ನೀಡಿ ಶೂಟೌಟ್‌ನಲ್ಲಿ ಮೃತರಾದ ಆಂತೋಣಿ ಸ್ವಾಮಿ, ಪೀಟರ್, ಕುಮಾರ್ ಅವರ ಕುಟುಂಬಸ್ಥರನ್ನು, ಗ್ರಾಮಸ್ಥರು, ಪೊಲೀಸ್, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಖುದ್ದಾಗಿ ಭೇಟಿಯಾಗಿ ವಸ್ತುಸ್ಥಿತಿಯ ಮಾಹಿತಿಯನ್ನು ಸಂಗ್ರಹಿಸಿತು.
ಶೂಟೌಟ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಮಹಿಮಾದಾಸ್ ಕಿಡ್ನಿಯಲ್ಲಿ ಕಲ್ಲು ಇರುವುದರಿಂದ ಶೂಟೌಟ್ ದಿನದಂದು ಘಟನಾ ಸ್ಥಳದಿಂದ ಹೇಗೋ ತಪ್ಪಿಸಿಕೊಂಡು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದು ಬಂದಿದೆ. ಶೂಟೌಟ್ ನಡೆದಿರುವ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಹೈನುಗಾರಿಕೆಯೇ ಜನರ ಮೂಲ ಕಸಬಾಗಿದ್ದು, ತೊಮಿಯರ್ ಪಾಳ್ಯದ ಹಾಲು ಉತ್ಪಾದಕರ ಸಂಘವು ಇದೆ ಎಂದು ಪಿಯುಸಿಎಲ್ ಪದಾಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಮಳೆಯಿಲ್ಲದ ಕಾರಣ ಬರದ ಛಾಯೆ ಹೆಚ್ಚಾಗಿದೆ. ಅದರಲ್ಲೂ ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬರ ಹೆಚ್ಚಾಗಿದೆ. ಜಾನುವಾರುಗಳಿಗೆ ಮೇವು ಸಿಗದೇ ಇರುವ ಹಿನ್ನಲೆಯಲ್ಲಿ ಹೈನುಗಾರಿಕೆ ಮಾಡುವವರು ಮೇವಿಗಾಗಿ ಕಾಡಿಗೆ ಜಾನುವಾರುಗಳನ್ನು ಕಳುಹಿಸುವ ವಾಡಿಕೆ ಹೆಚ್ಚಾಗಿದೆ. ಅದರಂತೆ ತೊಮಿಯರ್ ಪಾಳ್ಯ ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ಮೇವಿಗಾಗಿ ಕಾಡಿಗೆ ಕರೆದುಕೊಂಡು ಹೋಗುವುದು ವಾಡಿಕೆಯಾಗಿದೆ. ಆದರೆ ಜಾನುವಾರುಗಳು ಕಾಡಿಗೆ ಬಂದು ಮೇವು ಮೇಯುವುದನ್ನು ಅರಣ್ಯ ಸಿಬ್ಬಂದಿ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ವಿವರಿಸಿದ್ದಾರೆ.
ಪಿಯುಸಿಎಲ್ ಪದಾಧಿಕಾರಿಗಳು ಸತ್ಯ ಶೋಧನಾ ಕಾರ್ಯದಲ್ಲಿ ತೊಡಗಿದಾಗ ತಮ್ಮ ಮುಂದೆ ಕಾಡುತ್ತಿರುವ ಹಲವಾರು ಶಂಕಾಸ್ಪದ ಪ್ರಶ್ನೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಮುಂದಿಟ್ಟಿದೆ.
ಪಿಯುಸಿಎಲ್ ಮುಂದಿರುವ ಪ್ರಶ್ನೆಗಳು:
►ಎನ್‌ಕೌಂಟರ್ ನಡೆಯಿತೆಂದು ಹೇಳಲಾದ ಹೊಳೆಮುರದಟ್ಟಿ ಸ್ಥಳದಲ್ಲಿಯೇ ಅರಣ್ಯ ಇಲಾಖೆಯ ಕಳ್ಳಬೇಟೆ ತಡೆ ಶಿಬಿರವಿದೆ ಮತ್ತು ವಾಚ್ ಟವರ್ ಇದೆಯೆಂತಲೂ ಶಾಗ್ಯ ಬೀಟ್‌ನ ಕೆಲ ಸಿಬ್ಬಂದಿ ಖಾಯಂ ಆಗಿ ಅಲ್ಲಿ ವಾಸ್ತವ್ಯ ಹೂಡಿ ಕಾವಲಿರುವರೆಂದು ತಿಳಿದು ಬಂದಿದೆ. ಹೀಗಿರುವಾಗ ಯಾರೇ ಕಳ್ಳ ಬೇಟೆಗಾರರು, ಕಾನೂನು ಬಾಹಿರ ಚಟುವಟಿಕೆ ನಡೆಸುವವರು ಅರಣ್ಯ ಇಲಾಖೆಯ ರಕ್ಷಣಾ ಪಡೆ ಇರುವ ಸ್ಥಳಕ್ಕೆ ಹೋಗಿದ್ದರೆಂಬ ವಿವರವು ಪ್ರಶ್ನಾರ್ಹ.
► ಮೃತ ವ್ಯಕ್ತಿಗಳ ದೇಹದ ಮೇಲಿನ ಗುಂಡೇಟಿನ ಗುರುತುಗಳು ಅತೀ ಸಮೀಪದಿಂದ ಗುಂಡು ಹಾರಿಸಿರುವ ಸಾಧ್ಯತೆಯನ್ನು ತೋರುತ್ತಿವೆ. ಅರಣ್ಯಇಲಾಖೆಯ ಸ್ಲೈಡ್ ಆ್ಯಕ್ಸನ್ ಗನ್ ಎಂಬ ಎರಡು ಆಯುಧಗಳ ಪೈಕಿ ಒಂದು ಗನ್‌ನಿಂದ ಮೂರು ಸುತ್ತಿನ ಗುಂಡು ಹಾರಿಸಲಾಗಿದೆಯೆಂದು ಇನ್ನೂ ಖಚಿತಗೊಂಡಿರದ ಮಾಹಿತಿ ಲಭ್ಯವಾಗಿದೆ.
► ಮೃತರ ದೇಹದ ಮೇಲಿರುವ ಉಡುಪುಗಳು ದಟ್ಟ ಅರಣ್ಯದಲ್ಲಿ ರಾತ್ರಿಯ ವೇಳೆ ಓಡಾಡುವ, ಮಳೆಗಾಲದಲ್ಲಿ ಶಿಕಾರಿದಾರರು ಧರಿಸುವ ಉಡುಪಿನಂತೆ ಕಾಣದೆ ಮನೆಯಲ್ಲಿ ಧರಿಸುವ ಸರಳ ಉಡುಪುಗಳಂತೆ ಕಾಣುತ್ತಿದೆ.
► ಅರಣ್ಯ ಇಲಾಖೆಯು ಗುಂಡು ಹಾರಿಸಿರುವ ಶಾಗ್ಯ ಬೀಟ್‌ನ ಸಿಬ್ಬಂದಿಯ ವಿವರಗಳನ್ನು ಹನೂರು ಪೋಲೀಸ್ ಠಾಣಾ ತನಿಖಾಧಿಕಾರಿಗೆ ಇದುವರೆಗೂ ನೀಡಿಲ್ಲವೆಂದು ತಿಳಿದುಬಂದಿದೆ. ಅರಣ್ಯಇಲಾಖೆಯ ಅಧಿಕಾರಿಗಳು ಕಾನೂನಿನ ಚೌಕಟ್ಟಿನೊಳಗೆ ವ್ಯವಹರಿಸಲು ಅಸಹಕಾರ ತೋರುವುದು ಈ ಪ್ರಕರಣದ ಸತ್ಯಾಂಶವನ್ನು ಮುಚ್ಚಿಹಾಕಲು ನಡೆಸುತ್ತಿರುವ ಪ್ರಯತ್ನವಾಗಿದೆ.
► ಮೃತ ಮೂವರು ವ್ಯಕ್ತಿಗಳ ಮೇಲೆ ಹನೂರು ಪೊಲೀಸ್ ಠಾಣೆಯಲ್ಲಿ ಆಗಲಿ ಇಲ್ಲವೆ ವಲಯ ಅರಣ್ಯಾಧಿಕಾರಿ ವ್ಯಾಪ್ತಿಯಲ್ಲಾಗಲಿ ಇದುವರೆವಿಗೂ ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯಗಳು ಮಾಡಿರುವ ಪ್ರಕರಣಗಳು ದಾಖಲಾಗಿಲ್ಲ. ಈಗ ನಾಪತ್ತೆಯಾಗಿರುವ ಮಹಿಮಾದಾಸ್ ಮೇಲೆ ಕಾನೂನು ಬಾಹಿರವಾಗಿ ಮೀನು ಹಿಡಿದ ಒಂದು ಕೇಸ್‌ಇದೆ. ಹೀಗಿರುವಾಗ ಮೃತ ರೈತರನ್ನು ಕಳ್ಳ ಬೇಟೆ ನಡೆಸುತ್ತಾ ಬಂದಿದ್ದ ವೃತ್ತಿಪರ ದುಷ್ಕರ್ಮಿಗಳೆಂದು ಅರಣ್ಯಇಲಾಖೆಯು ಬಿಂಬಿಸುತ್ತಿರುವುದು ಸರಿಯೇ .
► ಅರಣ್ಯದೊಳಗಿನಿಂದ ಮೃತರ ದೇಹಗಳನ್ನು ಸಾಗಿಸಿದ ವಾಹನವನ್ನು ಪೋಲೀಸರು ಇದುವರೆಗೂ ವಶಕ್ಕೆ ಪಡೆಯದಿರುವುದು ಕಂಡು ಬಂದಿದೆ. ಇದು ಕಾನೂನು ಪರಿಪಾಲನೆಯ ಬಗ್ಗೆ ಉದ್ದೇಶಪೂರ್ವಕ ನಿರ್ಲಕ್ಷ್ಯ ಹಾಗೂ ಪ್ರಕರಣವನ್ನು ಮುಚ್ಚಿಹಾಕುವ ಒಳ ಒಪ್ಪಂದವಿರಬಹುದೆಂಬ ಶಂಕೆ ಮೂಡಿಸುತ್ತಿದೆ.
► ಎನ್‌ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಲು ಮೃತರ ಕುಟುಂಬದವರಿಗೆ, ಮಾಧ್ಯಮದವರಿಗೆ ಇಲ್ಲವೆ ನಾಗರಿಕ ಸಮಾಜದವರಿಗಾಗಲಿ ಇದುವರೆಗೂ ಅವಕಾಶ ನೀಡದಿರುವುದು ನಿಜ ಸಂಗತಿಗಳನ್ನು ಮರೆಮಾಚುವ ಪ್ರಯತ್ನವೆಂದು ಈ ಸಮಿತಿಯು ಭಾವಿಸುತ್ತದೆ.
► ಹತ್ಯೆಗಳು ನಡೆದ ನಂತರ ಶಾಸಕರು, ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ನೀಡಿರುವ ಹೇಳಿಕೆಗಳಲ್ಲಿ ಪರಸ್ಪರ ವಿರುದ್ಧಾಂಶಗಳಿವೆ. ಇದೂ ಸಹ ಎನ್‌ಕೌಂಟರ್ ಘಟನೆಯ ಬಗ್ಗೆ ಅನುಮಾನ ಮೂಡಿಸುವಂತಿದೆ.
► ಸರಕಾರವು ಎನ್‌ಕೌಂಟರ್‌ಕುರಿತು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಹಾಗೂ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಅವರ ತನಿಖೆಗೆ ಆದೇಶಿಸಿರುವುದನ್ನು ಅರಣ್ಯಇಲಾಖೆಯು ರಕ್ಷಣಾ ಕವಚವಾಗಿ ಬಳಸುತ್ತಾ ಪೋಲೀಸರ ತನಿಖೆಗೆ ಸಹಕರಿಸದಿರುವುದು ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಪಿಯುಸಿಎಲ್‌ನ ಕೆ.ವೆಂಕಟರಾಜು, ಪರಿಸರವಾದಿ ಡಿ.ಎಸ್.ದೊರೆಸ್ವಾಮಿ, ಹೈಕೋರ್ಟ್ ವಕೀಲ ಎಚ್.ಮೋಹನ್ ಕುಮಾರ್, ಎ.ಡಿ.ಸಿಲ್ವ, ಪತ್ರಕರ್ತ ಪಾರ್ವತೀಶ ಬಿಳಿದಾಳೆ ಉಪಸ್ಥಿತರಿದ್ದರು.






