ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರ ವಿಫಲ ಆರೋಪಿಸಿ ಕರ್ನಾಟಕ ಸೇನಾಪಡೆ ಸಂಘಟನೆಯಿಂದ ಪ್ರತಿಭಟನೆ

ಚಾಮರಾಜನಗರ: ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿ ನಗರದಲ್ಲಿ ಕರ್ನಾಟಕ ಸೇನಾಪಡೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಭುವನೇಶ್ವರಿ ವೃತ್ತದಲ್ಲಿ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು ಡ್ರಗ್ಸ್ ಮಾರಾಟಕ್ಕೆ ಸರಕಾರ ಕಡಿವಾಣ ಹಾಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕ ಸೇನಾಪಡೆ ಸಂಘಟನೆ ಅಧ್ಯಕ್ಷ ಚಾರಂ ಶ್ರೀನಿವಾಸಗೌಡ ಮಾತನಾಡಿ, ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಅವ್ಯಾಹತವಾಗಿ ನಡೆಯುತ್ತಿದೆ. ಆದರೂ ರಾಜ್ಯ ಸರಕಾರ ಇದನ್ನು ತಡೆಯುವ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸಿಲ್ಲ. ಹೊಸವರ್ಷಾಚರಣೆ ವೇಳೆ ಯುವಕ, ಯುವತಿಯರು ಡ್ರಗ್ಸ್ ಸೇವನೆಗೊಳಗಾಗಿ ತಾವು ಯಾರೆಂಬುದನ್ನೇ ಮರೆತಿದ್ದರು. ಅಷ್ಟರ ಮಟ್ಟಿಗೆ ಡ್ರಗ್ಸ್ ಅವರ ಮೇಲೆ ಪರಿಣಾಮ ಬೀರಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗಿರುವುದು ಡ್ರಗ್ಸ್ ಮಾಫಿಯಾ ದಂದೆಗೆ ಪುಷ್ಠಿ ನೀಡಿದೆ. ಕೂಡಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡು, ವಿದ್ಯಾರ್ಥಿಗಳು ಹಾಗೂ ಯುವಜನರ ಬದುಕಿಗೆ ಮರಣಶಾಸನವಾದ ಮಾರಕ ಡ್ರಗ್ಸ್ ಮಾರಾಟಕ್ಕೆ ಕಡಿವಾಣ ಹಾಕಬೇಕು, ದೇಶದ ಯುವಕರ ಬದುಕನ್ನು ಹಸನುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಿಜಧನಿ ಗೋವಿಂದರಾಜು, ಪಣ್ಯದಹುಂಡಿರಾಜು, ಲಿಂಗರಾಜು, ತಾಂಡವಮೂರ್ತಿ, ರವಿಚಂದ್ರಪ್ರಸಾದ್, ಎಸ್‍ಪಿಬಿ ಬಳಗದ ಶಿವಣ್ಣ, ಡ್ಯಾನ್ಸ್ ಬಸವರಾಜು, ರಾಜಣ್ಣ, ಮುತ್ತುರಾಜು, ಸುರೇಶ್‍ಗೌಡ, ರಾಜು, ಹೊನ್ನಹಳ್ಳಿನಾಗಪ್ಪ, ಹೆಗ್ಗೊಠಾರ ಶಿವಸ್ವಾಮಿ, ಲೋಕೇಶ್, ನಾಗೇಂದ್ರ ನಾಗರಾಜು, ಭಾಗವಹಿಸಿದ್ದರು.





