ಕೊಳ್ಳೇಗಾಲ : ಸರ್ಕಾರಿ ಸ್ಥಳದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ

ಚಾಮರಾಜನಗರ: ಸರ್ಕಾರಿ ಸ್ಥಳದಲ್ಲಿ ನಿರ್ಮಾಣವಾಗಿರುವ ಅಂಗಡಿಗಳನ್ನು ತೆರವು ಕಾರ್ಯಾಚರಣೆ ಕೊಳ್ಳೇಗಾಲದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕೊಳ್ಳೇಗಾಲ ಪಟ್ಟಣದಿಂದ ಕುರುಬನಕಟ್ಟೆಗೆ ತೆರಳುವ ವಾರ್ಗದ ಇಕ್ಕಡೆಗಳಲ್ಲಿ ಸರ್ಕಾರಿ ಸ್ಥಳಗಳಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದ ನಾಗಣ್ಣ ಎಂಬವರು, ಕೊಳ್ಳೇಗಾಲದ ಎಪಿಎಂಸಿ ಬಳಿಯ 10 ಅಂಗಡಿಗಳು ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದು, ತೆರವುಗೊಳಿಸುವಂತೆ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಬಂದ ಸೂಚನೆಯಂತೆ ಕೊಳ್ಳೇಗಾಲದ ತಹಸೀಲ್ದಾರ್ ಅವರು ಬುಧವಾರ ಬೆಳಗ್ಗೆ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಲು ಜೆಸಿಬಿ ಸಮೇತ ಆಗಮಿಸಿದ್ದಾರೆ. ಈ ವೇಳೆ ತಹಸೀಲ್ದಾರ್ ಮತ್ತು ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ ನಡೆಯಿತಾದರೂ ಕೊನೆಗೂ ಅಂಗಡಿಗಳ ತೆರವಿಗೆ ತಹಸೀಲ್ದಾರ್ ಮುಂದಾದರು.
ಈ ವೇಳೆ ಕೊಳ್ಳೇಗಾಲ ಪೊಲೀಸ್ ಇನ್ಸ್ ಪೆಕ್ಟರ್ ಶಿವಮಾದಯ್ಯ ಹಾಜರಿದ್ದರು.
Next Story