ಕೊಳ್ಳೇಗಾಲ | ಬೈಕ್-ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಬೈಪಾಸ್ ರಸ್ತೆಯಲ್ಲಿ ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಶುಕ್ರವಾರ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ನಟರಾಜು(65) ಹಾಗೂ ಮಹೇಶ್ ಅಲಿಯಾಸ್ ಮಾಯಪ್ಪ(50) ಮೃತಪಟ್ಟವರು.
ಮೃತರಿಬ್ಬರು ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ಎಂದಿನಂತೆ ಕೆಲಸ ಮುಗಿಸಿ ವಾಪಸ್ಸು ಸತ್ತೇಗಾಲ ಗ್ರಾಮದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಬೆಂಗಳೂರು ಕಡೆಯಿಂದ ಕೊಳ್ಳೇಗಾಲದ ಕಡೆಗೆ ಬರುತ್ತಿದ್ದ ಕಾರು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಅಪಘಾತ ತೀವ್ರತೆಗೆ ಬೈಕ್ ಹಾಗೂ ಕಾರು ರಸ್ತೆಯ ಪಕ್ಕದ ಹಳ್ಳಕ್ಕೆ ನುಗ್ಗಿದೆ. ಈ ವೇಳೆ ಸ್ಥಳದಲ್ಲಿಯೇ ಒಬ್ಬ ಬೈಕ್ ಸವಾರ ಮೃತಪಟ್ಟಿದ್ದಾನೆ. ಗಭೀರ ಗಾಯಗೊಂಡಿದ್ದ ಮೊತ್ತೊಬ್ಬ ಸವಾರರನ್ನುಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ಈ ಸಂಬಂಧ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಸುಪ್ರೀತ್ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಪೊಲೀಸರು ಒಪ್ಪಿಸಿದ್ದಾರೆ.





