Kollegala | ಕೆಎಸ್ಸಾರ್ಟಿಸಿ ಬಸ್ ಪಲ್ಟಿ; ಇಬ್ಬರು ಮೃತ್ಯು, 40ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ಚಾಮರಾಜನಗರ : ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, 40ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ- ದೊಡ್ಡಿಂದುವಾಡಿ ಮಾರ್ಗದ ರಸ್ತೆಯಲ್ಲಿ ಸೋಮವಾರ ಸಂಭವಿಸಿದೆ.
ಕೊಳ್ಳೇಗಾಲ ಪಟ್ಟಣದ ಪುಟ್ಟನಂಜಮ್ಮ (60) ಹಾಗೂ ಚಾಮರಾಜನಗರ ತಾಲೂಕಿನ ಕುದೇರು ಗ್ರಾಮದ ನಿವಾಸಿ ಮಹೇಶ್ (55) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುವಾಗ ಬಸ್ನ ಮುಂಭಾಗದ ಚಕ್ರ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣಕ್ಕೆ ಸಿಗದೇ ರಸ್ತೆಬದಿಯ ಹಳ್ಳಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ.
ಅಪಘಾತ ನಡೆದ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್, ಕೊಳ್ಳೇಗಾಲ ತಹಸಿಲ್ದಾರ್ ಬಸವರಾಜು, ಇತರ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಮುತ್ತುರಾಜ್ ಆಸ್ಪತ್ರೆಗೂ ತೆರಳಿ ಗಾಯಾಳುಗಳನ್ನು ವಿಚಾರಿಸಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಪ್ರಕರಣ ದಾಖಲಾಗಿದೆ.




