ಹನೂರು: ಸಿಡಿಲಿನ ಆಘಾತಕ್ಕೆ ಮೂರು ಜಾನುವಾರುಗಳು ಬಲಿ

ಚಾಮರಾಜನಗರ, ಮೇ 3: ಸಿಡಿಲಿನ ಆಘಾತಕ್ಕೆ ಮೂರು ಜಾನುವಾರುಗಳು ಅಸುನೀಗಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.
ಚೆನ್ನೂರು ಗ್ರಾಮದ ರೈತ ದೊರೆಸ್ವಾಮಿ ಎಂಬುವರಿಗೆ ಸೇರಿದ ಎರಡು ಜಾನುವಾರು ಹಾಗೂ ಇದೇ ಗ್ರಾಮದ ವೀರಭದ್ರೇಗೌಡ ಎಂಬುವರಿಗೆ ಸೇರಿದ ಒಂದು ಜಾನುವಾರು ಸಿಡಿಲಿಗೆ ಬಲಿಯಾಗಿದೆ
ಬಿಸಿಲು ಹೆಚ್ಚಾಗಿರುವ ಕಾರಣ ನೆರಳಿಗೆ ಜಾನುವಾರುಗಳನ್ನು ಮರದ ಕೆಳಗಡೆ ಕಟ್ಟಿ ಹಾಕಲಾಗಿತ್ತು. ಈ ಸಮಯದಲ್ಲಿ ಬಿರುಗಾಳಿ ಮಳೆ, ಸಿಡಿಲಿಗೆ ಮೂರು ಜಾನುವಾರುಗಳು ಸಾವನ್ನಪ್ಪಿವೆ. ಇದರಿಂದ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.
ಘಟನಾ ಸ್ಥಳಕ್ಕೆ ತಾಲೂಕು ಪಶು ವೈದ್ಯಾಧಿಕಾರಿ ಭೇಟಿ ನೀಡಿ ಜಾನುವಾರುಗಳ ಮರಣೋತ್ತರ ಪರೀಕ್ಷೆ ನಡೆಸಿ ರೈತರಿಗೆ ಸರ್ಕಾರದಿಂದ ಸಿಗುವ ಪರಿಹಾರಕ್ಕೆ ಹಿರಿಯ ಅಧಿಕಾರಿಗಳಿಗೆ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ
ಸೂಕ್ತ ಪರಿಹಾರಕ್ಕೆ ಅಗ್ರಹ : ಚೆನ್ನೂರು ಗ್ರಾಮದಲ್ಲಿ ಬರ ಸಿಡಿಲಿಗೆ ಸಾವನ್ನಪ್ಪಿರುವ ಜಾನುವಾರುಗಳಿಗೆ ಸರ್ಕಾರ ಜಿಲ್ಲಾಡಳಿತ ಸಂಬಂಧ ಪಟ್ಟ ಇಲಾಖೆ ಪ್ರಕೃತಿ ವಿಕೋಪ ದಡಿ ಸೂಕ್ತ ಪರಿಹಾರ ನೀಡುವಂತೆ ರೈತ ಸಂಘಟನೆ ಒತ್ತಾಯಿಸಿದೆ.







