ಚಾಮರಾಜನಗರ | ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಪತ್ನಿಯ ಹತ್ಯೆ: ಪತಿ ಪರಾರಿ

ಸಾಂದರ್ಭಿಕ ಚಿತ್ರ
ಚಾಮರಾಜನಗರ : ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಗೃಹಿಣಿಯನ್ನು ಪತಿಯೇ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಸಮೀಪವೇ ನಡೆದಿರುವುದು ವರದಿಯಾಗಿದೆ.
ಚಾಮರಾಜನಗರ ಪಟ್ಟಣದ ಸೋಮವಾರ ಪೇಟೆ ನಿವಾಸಿ ಗಿರೀಶ್ ಎಂಬಾತ ತನ್ನ ಪತ್ನಿ ವಿದ್ಯಾ (30) ಅವರನ್ನು ಕುಡಗೋಲಿನಿಂದ ಹತ್ಯೆ ಮಾಡಿದ ಆರೋಪಿ ಎಂದು ತಿಳಿದುಬಂದಿದೆ.
ಕಳೆದ ಮೂರು ತಿಂಗಳ ಹಿಂದೆ ವಿದ್ಯಾ ಯುವಕನೊಬ್ಬನೊಂದಿಗೆ ಪತಿಯ ಮನೆಯಿಂದ ನಾಪತ್ತೆಯಾಗಿದ್ದರು ಎನ್ನಲಾಗಿದೆ. ಪತ್ನಿಯನ್ನು ಹುಡುಕಿಕೊಡುವಂತೆ ಗಿರೀಶ್ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪತ್ನಿಯನ್ನು ಹುಡುಕಿ ಕೊಡುವ ಕಾರ್ಯದಲ್ಲಿ ತೊಡಗಿದ್ದ ಪೊಲೀಸರು ವಿದ್ಯಾಳನ್ನು ಆಕೆಯ ಪ್ರಿಯತಮನಿಂದ ಕರೆಸಿಕೊಂಡು ಗಂಡನ ಮನೆಗೆ ತೆರಳುವಂತೆ ಮನವಿ ಮಾಡಿದ್ದರೂ, ಸಹ ಆಕೆ ಪತಿಯೊಂದಿಗೆ ತೆರಳದೆ ಪ್ರಿಯತಮನೊಂದಿಗೆ ತೆರಳುತ್ತೇನೆ ಎಂದಾಗ ಪೊಲೀಸರು, ವಿದ್ಯಾಳನ್ನು ಸಮೀಪದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದರು.
ಪತ್ನಿಯನ್ನು ಮನೆಗೆ ಬರುವಂತೆ ಮನವಿ ಮಾಡಿದರೂ ಸ್ಪಂದಿಸದಿದ್ದಕ್ಕೆ ಬೇಸತ್ತ ಗಿರೀಶ್ ಮೊದಲೇ ತಂದಿದ್ದ ಕುಡಗೋಲಿನಿಂದ ಪತ್ನಿಗೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದ ವಿದ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ





