ʼಮುಳ್ಳೂರು ನಾಗರಾಜ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿʼಗೆ ಎಸ್. ಮಂಜುನಾಥ ಆಯ್ಕೆ

ಚಾಮರಾಜನಗರ: ಪ್ರತಿಷ್ಠಿತ ರಂಗವಾಹಿನಿ ಸಂಸ್ಥೆ ನೀಡುವ 15ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕವಿ ಎಸ್. ಮಂಜುನಾಥ ಅವರ ‘ಹೆಬ್ಬಿರುಳಿನ ನಿಬ್ಬೆರಗು’ ಕವನ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಜೂನ್ 28ರಂದು ಮೈಸೂರಿನಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗವಾಹಿನಿ ಸಂಸ್ಥೆಯ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ ತಿಳಿಸಿದ್ದಾರೆ.
ಕೋಲಾರ ಜಿಲ್ಲೆಯ ಲಕ್ಕೂರಿನವರಾದ ಎಸ್. ಮಂಜುನಾಥ ಅವರು ಕಾವ್ಯ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಸಂವೇದನಾಶೀಲ ಕವಿಯಾಗಿದ್ದಾರೆ. ಅವರ ‘ಮನುಷ್ಯ ಯುದ್ಧದ ಬಣ್ಣಗಳು’, ‘ಚಾಟಿಗೆ ಕಟ್ಟಿದ ಗೆಜ್ಜೆ’ ಹಾಗೂ ‘ಹೆಬ್ಬಿರುಳಿನ ನಿಬ್ಬೆರಗು’ ಕವನ ಸಂಕಲನಗಳು ಈಗಾಗಲೇ ಪ್ರಕಟಗೊಂಡಿವೆ.
‘ಫಲಿತಾಕ್ಷರ’, ‘ವಿಷಘಮ್ಮಲು’, ‘ಕೀಯ ಕೀಯ ರಾಜಕೀಯ’, ‘ಪುಟ್ಟಿ’, ‘ಗುಲಾಬಿ ಗ್ಯಾಂಗ್’, ‘ಟೈಮ್ ಲೈನ್’, ‘ಫ್ರಿಡ್ಜ್ನಲ್ಲೇನಿದೆ’ ಹಾಗೂ ‘ಏಕತಂತಿ ಏಕನಾದ’ ಸೇರಿದಂತೆ ಹಲವು ಬೀದಿ ನಾಟಕಗಳನ್ನು ರಚಿಸಿದ್ದಾರೆ.
‘ಕೌದಿ’ ಚಲನಚಿತ್ರಕ್ಕೆ ಗೀತರಚನೆ ಮಾಡಿರುವ ಅವರು, ‘ಡಿಎನ್ಎ’ ಹಾಗೂ ‘ಚೆಲುವಿನ ಪರಂಗಿ ಗಿಡಗಳು’ ಚಲನಚಿತ್ರಗಳಿಗೆ ಸಂಭಾಷಣೆಗಳನ್ನು ರಚಿಸಿದ್ದಾರೆ.




