ಕೇಂದ್ರ ಸರಕಾರ ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷ ತಂದಿಡುವ ಕೆಲಸ ಮಾಡುತ್ತಿದೆ : ಚಿಂತಕ ಶಿವಸುಂದರ್
ಚಾಮರಾಜನಗರದಲ್ಲಿ ವಕ್ಪ್ ತಿದ್ದುಪಡಿ ಕಾಯ್ದೆ ವಿರುದ್ಧ ಸಮಾವೇಶ

ಚಾಮರಾಜನಗರ : 11 ವರ್ಷಗಳ ಕಾಲ ಆಡಳಿತ ನಡೆಸಿದ ಕೇಂದ್ರ ಬಿಜೆಪಿ ಸರಕಾರ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆ ಮಾಡಲಿಲ್ಲ. ಬದಲಿಗೆ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿಮಾಡುವ ಮೂಲಕ ಸಹೋದರರಂತೆ ಬದುಕುತ್ತಿರುವ ಹಿಂದೂ-ಮುಸ್ಲಿಮರ ಮಧ್ಯೆ ದ್ವೇಷ ತಂದಿಡುವ ಕೆಲಸ ಮಾಡುತ್ತಿದೆ ಎಂದು ಚಿಂತಕ, ಅಂಕಣಕಾರ ಶಿವಸುಂದರ್ ಆರೋಪಿಸಿದರು.
ಚಾಮರಾಜನಗರದ ಈದ್ಗಾ ಮೈದಾನದಲ್ಲಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ವಕ್ಪ್ ಮಸೂದೆ ವಿರೋಧಿಸುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ 2024ನೇ ಸಾಲಿನಲ್ಲಿ ವಕ್ಪ್ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಈಗಿನ ಕಾಯ್ದೆ ಪ್ರಕಾರ ವಕ್ಪ್ ಆಸ್ತಿ ಬಳಕೆಗೆ ಸಂಬಂಧಿಸಿದಂತೆ ವ್ಯಕ್ತಿ ಕನಿಷ್ಠ 5 ವರ್ಷ ಮುಸ್ಲಿಮನಾಗಿರಬೇಕು ಎಂದು ಹೇಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಮುಸ್ಲಿಮರಲ್ಲದೇ ಇತರರು ವಕ್ಪ್ ಆಸ್ತಿಯನ್ನು ನಿರ್ವಹಣೆ ಮಾಡಬಹುದು ಎಂಬ ಅನೇಕ ಸಂವಿಧಾನ ವಿರೋಧಿ ಕ್ರಮಗಳನ್ನು ತಿದ್ದುಪಡಿಯಲ್ಲಿ ಸೇರಿಸಲಾಗಿದೆ. ಸಂವಿಧಾನದ ಪರಿಚ್ಚೇದದ 14 -15ರ ಪ್ರಕಾರ ಇದು ಸಂವಿಧಾನ ವಿರೋಧಿಯಾಗಿದ್ದು, ಮುಸ್ಲಿಮರ ಮೂಲಭೂತಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರದಲ್ಲಿ ಸತತವಾಗಿ ಕಾರ್ಯ ನಿರ್ವಹಿಸುತ್ತಿರುವುದು ದುಖಃದ ಸಂಗತಿ ಎಂದು ಆಕ್ರೋಶ ಹೊರ ಹಾಕಿದರು.
ವಕ್ಪ್ ಮಸೂದೆ ವಿರೋಧಿಸುವ ಬೃಹತ್ ಸಮಾವೇಶದ ಅಧ್ಯಕ್ಷತೆ ಖಾಝಿ ಕಾಮಿಲ್ ನಯೀಮುಲ್ ಹಕ್ ವಹಿಸಿದರು.
ಮೌಲಾನ ಶಾ ವಲಿ ಉಲ್ಲಾ, ಮುಫ್ತಿ ಜಾಫರ್ ಹುಸೇನ್ ಖಾಸಿಮಿ, ಮೌಲಾನ ತಸ್ವೀರ್ ಹಾಸ್ಮಿ, ಆಲ್ ಇಂಡಿಯಾ ಪರ್ಸನಲ್ ಬೋರ್ಡ್ ಸದಸ್ಯ ಮುಫ್ತಿ ಇಫ್ತಾರ್ ಸಾಬ್, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಎಸ್ಡಿಪಿಐ ರಾಜ್ಯ ಅಧ್ಯಕ್ಷ ಅಬ್ದಲ್ ಮಜೀದ್, ಚೂಡ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನ, ಸೈಯದ್ ರಫೀ, ಸೈಯದ್ ಲತೀಫುರ್ ರೆಹಮಾನ್, ಅಬ್ರಾರ್ ಅಹ್ಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.