5 ಹುಲಿಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ : ಸಚಿವ ಈಶ್ವರ್ ಖಂಡ್ರೆ
"ವಿಷಪ್ರಾಶನದಿಂದಲೇ ಐದು ಹುಲಿಗಳು ಸಾವು ಶಂಕೆ"

ಚಾಮರಾಜನಗರ : ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮೀಣ್ಯಂ ಬಳಿಯ ಗಾಜನೂರು ಗಸ್ತಿನಲ್ಲಿ 5 ಹುಲಿಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ ಅವರು ತಿಳಿಸಿದ್ದಾರೆ.
ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಐದು ಹುಲಿಗಳ ಮೃತದೇಹಗಳಿಗೆ ಅಗ್ನಿ ಸ್ಪರ್ಶ ಮಾಡಿದ್ದನ್ನು ವೀಕ್ಷಿಸಿದ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆಗೆ ಆಗಮಿಸಿರುವ ಅಧಿಕಾರಿಗಳು ಮತ್ತು ತಜ್ಞರು, ವಿಷಪ್ರಾಶನದಿಂದ ಹುಲಿಗಳು ಸತ್ತಿವೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದೊಂದು ಅಪರಾಧ. ಈ ಕುಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರಕಾರ ವನ್ಯಜೀವಿ ಸಂರಕ್ಷಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಂಡಿರುವುದರಿಂದಲೇ ರಾಜ್ಯ ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಐದು ಹುಲಿಗಳು ಒಂದೇ ದಿನ ಸಾವಿಗೀಡಾಗಿರುವುದು ಅತ್ಯಂತ ನೋವಿನ ಹಾಗೂ ಹೃದಯ ವಿದ್ರಾವಕ ಘಟನೆಯಾಗಿದೆ. ಈ ಘಟನೆ ಅತೀವ ನೋವು ತಂದಿದೆ ಎಂದರು.
ಹುಲಿಗಳ ಅಸಹಜ ಸಾವಿನ ವಿಷಯ ತಿಳಿದ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್.ಟಿ.ಸಿ.ಎ.) ಪ್ರತಿನಿಧಿಗಳೂ ಇಲ್ಲಿಗೆ ಆಗಮಿಸಿದ್ದಾರೆ. ವನ್ಯಜೀವಿ ತಜ್ಞರು ಮತ್ತು ಸಾಕ್ಷಿಗಳೂ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ನಿಯಮಾನುಸಾರ ನಡೆಸಲಾಗಿದ್ದು, ಮೃತದೇಹಗಳ ಸಂಸ್ಕಾರವೂ ಆಗಿದೆ, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಹನೂರು ಶಾಸಕ ಎಂ.ಆರ್. ಮಂಜುನಾಥ್, ಎಪಿಸಿಸಿಎಫ್ ಶ್ರೇನಿವಾಸ್, ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಟಿ ಹಿರಲಾಲ್, ತನಿಖಾ ತಂಡದ ಅಧಿಕಾರಿಗಳು, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ , ಮಲ್ಲೇಶಪ್ಪ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.







