ಹುಲಿಗಳ ಸಾವು ಪ್ರಕರಣ | ಕರ್ತವ್ಯ ಲೋಪ ಹಿನ್ನಲೆ ಡಿಸಿಎಫ್, ಎಸಿಎಫ್ ಮತ್ತು ಆರ್‌ಎಫ್‍ಒಗೆ ಕಡ್ಡಾಯ ರಜೆ

ಚಾಮರಾಜನಗರ : ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡು ಬಂದಿರುವ ಹಿನ್ನಲೆಯಲ್ಲಿ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಹಿತ ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆಯಲ್ಲಿ ತೆರಳಲು ಅರಣ್ಯ ಇಲಾಖೆ ಆದೇಶಿಸಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಬಳಿಯ ಅರಣ್ಯದಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಐದು ಹುಲಿಗಳು ಧಾರಣವಾಗಿ ಸಾವನ್ನಪ್ಪಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಕರ್ತವ್ಯ ಲೋಪ ಮೇಲ್ನೋಟಕ್ಕೆ ಕಂಡು ಬಂದಿತ್ತು. ಅದರಂತೆ ಅರಣ್ಯ ಇಲಾಖೆಯು ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವೈ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ ಮತ್ತು ವಲಯ ಅರಣ್ಯಾಧಿಕಾರಿ ಮಾದೇಶ್ ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶಿಸಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅರಣ್ಯ ಇಲಾಖೆಯ ಕೇಂದ್ರ ಸ್ಥಾನದಲ್ಲಿರುವ ಹಾಗೂ ಈ ಹಿಂದೆ ಸೇವೆ ಸಲ್ಲಿಸಿದ್ದ ಸಂತೋಷ್ ಕುಮಾರ್ ಜಿ ರವರಿಗೆ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಳ್ಳುವಂತೆ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಕೊಳ್ಳೇಗಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಸ್ವಪ್ನಿಲ್ ಮನೋಹರ್ ಅಹಿರೆ ರವರಿಗೆ ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರವನ್ನುಮತ್ತು ತರಭೇತಿ ವಲಯ ಅರಣ್ಯಾಧಿಕಾರಿಯಾಗಿರುವ ಉಮಾಪತಿ ಕೆ ರವರನ್ನು ಹೂಗ್ಯಂ ವಲಯದ ವಲಯ ಅರಣ್ಯಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರ ವಹಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯಾಧಿಕಾರಿ ಅರಣ್ಯ ಪಡೆ ಮುಖ್ಯಸ್ಥರು ಆದೇಶಿಸಿದ್ದಾರೆ.
ಹುಲಿಗಳ ಸಾವು ನಡೆದ ಘಟನಾ ಸ್ಥಳದಿಂದ 800 ಮೀಟರ್ ಅಂತರದಲ್ಲಿ ಕಳ್ಳ ಬೇಟೆ ತಡೆ ಶಿಬಿರವಿದ್ದು, ಮುಖ್ಯ ಸಂಚಾರ ರಸ್ತೆಯಿಂದ 100 ಮೀಟರ್ ಅಂತರದಲ್ಲಿ ಹುಲಿಗಳು ಸಾವನ್ನಪ್ಪಿರುವುದು ಹಾಗೂ ಕಳೆದ ಮೂರು ತಿಂಗಳಿಂದ ಹೊರ ಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದೇ ಇರುವುದು ಗಮನಿಸಿದರೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಹೂಗ್ಯಂ ವಲಯ ಅರಣ್ಯಾಧಿಕಾರಿಗಳು ಕರ್ತವ್ಯ ಲೋಪ ಎಸಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನಲೆಯಲ್ಲಿ ಮೂವರು ಅಧಿಕಾರಿಗಳಿಗೆ ಮುಂದಿನ ಆದೇಶತನಕ ಕಡ್ಡಾಯ ರಜೆ ಮೇಲೆ ತೆರಳಲು ಆದೇಶಿಸಿದ್ದಾರೆ.