Chamarajanagara | ಚಿರತೆ ದಾಳಿಗೆ 10 ವರ್ಷದ ಬಾಲಕ ಬಲಿ

ಸಾಂದರ್ಭಿಕ ಚಿತ್ರ | PC : Image by wirestock on Freepik
ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಬಳಿ ಚಿರತೆ ದಾಳಿಗೆ 10 ವರ್ಷದ ಬಾಲಕನೊಬ್ಬ ಮೃತಪಟ್ಟ ದಾರುಣ ಘಟನೆ ರವಿವಾರ ಬೆಳಗ್ಗೆ ನಡೆದಿದೆ.
ಬೆಂಗಳೂರು ಮೂಲದ ಹರ್ಷಿತ್(10) ಚಿರತೆ ದಾಳಿಗೆ ಬಲಿಯಾದ ಬಾಲಕ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಮೀಪದ ನಾಗಮಲೆಯ ಬಳಿ ಈ ಘಟನೆ ನಡೆದಿದೆ.
ಕುಟುಂಬಸ್ಥರ ಜೊತೆ ಮಲೆ ಮಹದೇಶ್ವರ ಬೆಟ್ಟ ದೇವಾಲಯಕ್ಕೆ ಆಗಮಿಸಿದ್ದ ಬಾಲಕ ಹರ್ಷಿತ್ ರವಿವಾರ ಬೆಳಗ್ಗೆ ನಾಗಮಲೆಗೆ ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಹಠಾತ್ ಎರಗಿದ ಚಿರತೆ ದಾಳಿ ನಡೆಸಿ ಹರ್ಷಿತ್ ನನ್ನು ಎಳೆದೊಯ್ದಿದೆ. ಸುಮಾರು ಅರ್ಧ ತಾಸು ಹುಡುಕಾಟದ ಬಳಿಕ ಹರ್ಷಿತ್ ಮೃತದೇಹ ಪತ್ತೆಯಾಗಿದೆ.
ಮಹದೇಶ್ವರ ಬೆಟ್ಟದ ಬಳಿ ಕಳೆದ ಕೆಲ ತಿಂಗಳ ಹಿಂದೆ ಚಿರತೆ ದಾಳಿಗೆ ಪಾದಯಾತ್ರಿಯೊಬ್ಬರು ಸಾವನ್ನಪ್ಪಿದ್ದರು. ಇದಾದ ಬಳಿಕ ಇದೀಗ ನಾಗಮಲೆ ಬಳಿ ಹತ್ತು ವರ್ಷದ ಬಾಲಕ ಚಿರತೆ ದಾಳಿಗೆ ಬಲಿಯಾಗಿದ್ದಾನೆ.
ಮೃತದೇಹವನ್ನು ಮಲೆಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗುತ್ತಿದೆ. ಚಿರತೆ ದಾಳಿಯಿಂದ ಮೃತಪಟ್ಟ ಬಾಲಕನ ಕುಟುಂಬಸ್ಥರು ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟುವಂತಿದೆ.




