ಚಾಮರಾಜನಗರ | ತೋಟದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದ ಇಬ್ಬರು ವಿದ್ಯುತ್ ಪ್ರವಹಿಸಿ ಮೃತ್ಯು

ಚಾಮರಾಜನಗರ : ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ ಇಬ್ಬರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.
ಕೊತ್ತಲವಾಡಿ ಗ್ರಾಮದ ಲಿಂಗಣ್ಣಾಚಾರ್ ಅವರಿಗೆ ಸೇರಿದ್ದ ಜಮೀನಿನಲ್ಲಿ ತೆಂಗಿನಕಾಯಿ ಕೀಳಲು ತೆರಳಿದ್ದ ಸ್ವಾಮಿ ಮತ್ತು ಕೃಷ್ಣ ಎಂಬವರು ಅಕ್ರಮ ವಿದ್ಯುತ್ ತಂತಿ ಬೇಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಕೊತ್ತಲವಾಡಿ ಗ್ರಾಮದ ಲಿಂಗಣ್ಣಾಚಾರ್, ತಮ್ಮ ಜಮೀನನ್ನು ಕೇರಳ ಮೂಲದ ಫಿಯಾಝ್ ಎಂಬಾತನಿಗೆ ಗುತ್ತಿಗೆ ಕೊಟ್ಟಿದ್ದರು. ಇದೇ ಜಮೀನಿನಲ್ಲಿ ಸುತ್ತ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ತಂತಿಬೇಲಿಗೆ ಅಕ್ರಮವಾಗಿ ವಿದ್ಯುತ್ ಹರಿಸಿದ್ದರು. ವಿದ್ಯುತ್ ಹರಿಯುತ್ತಿದ್ದ ತಂತಿಯೂ ಸಹ ತೆಂಗಿನ ಮರಕ್ಕೆ ತಾಗುತ್ತಿತ್ತು ಎನ್ನಲಾಗಿದೆ.
ತೆಂಗಿನಕಾಯಿ ಕೀಳಲು ಕೂಲಿ ಕೆಲಸಕ್ಕೆ ಬಂದ ಸ್ವಾಮಿ(52), ಕೃಷ್ಣ (50) ತಮ್ಮ ಕೆಲಸದಲ್ಲಿ ನಿರತವಾಗಿರುವಾಗ ತೆಂಗಿನ ಮರಕ್ಕೆ ತಾಗುತ್ತಿದ್ದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ.
ವಿಷಯ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಮತ್ತು ಡಿವೈಎಸ್ಪಿ ಸ್ನೇಹಾರಾಜ್, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.
"ಜಮೀನಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಇದನ್ನು ತಿಳಿಯದ ಇಬ್ಬರು ಕೂಲಿಕಾರರು ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದಾರೆ. ಈ ಜಮೀನಿನನ್ನು ಮಾಲೀಕ ಕೇರಳದವರಿಗೆ ಗುತ್ತಿಗೆ ನೀಡಿದ್ದಾರೆ. ಗುತ್ತಿಗೆ ಕೊಟ್ಟಿರುವ ದಾಖಲೆಗಳು ಇದ್ದರೆ ಕೇರಳದ ಗುತ್ತಿಗೆದಾರನ ಮೇಲೆ ಅಥವಾ ದಾಖಲೆಗಳು ಇಲ್ಲದಿದ್ದರೆ ಭೂ ಮಾಲೀಕನ ಮೇಲೆ ಪ್ರಕರಣ ದಾಖಲಿಸಲಾಗುವುದು"
ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ







