ಇಂದು ಕೊರಳು ಕೇಳುತಿಹರು - ಅಂದು ಬೆರಳು ಕೇಳಿದವರು

ದರ್ಶನ್ ದುರಂತವು ತೀರಾ ಅನಿರೀಕ್ಷಿತವೇನೂ ಆಗಿರಲಿಲ್ಲ. ದರ್ಶನ್ ಸಾವಿಗಿಂತ ಸುಮಾರು ಒಂದು ವರ್ಷ ಮುನ್ನವೇ IIT- ಬಾಂಬೆಯ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಘಟಕವು ಕ್ಯಾಂಪಸ್‌ನಲ್ಲಿ ನಡೆಸಿದ್ದ ಒಂದು ಆಂತರಿಕ ಸಮೀಕ್ಷೆಯು, ಅಲ್ಲಿಯ ವಾತಾವರಣವು ದಲಿತ ವಿದ್ಯಾರ್ಥಿಗಳ ಪಾಲಿಗೆ ಎಷ್ಟು ಪ್ರತಿಕೂಲವಾಗಿದೆ ಎಂಬುದನ್ನು ಪುರಾವೆ ಸಹಿತ ಸಾಬೀತು ಪಡಿಸಿತ್ತು.
ಭಾಗ - 1
ನಾವು ಮರೆತು ಅಥವಾ ದಣಿದು ಚರ್ಚಿಸುವುದನ್ನೇ ಬಿಟ್ಟುಬಿಟ್ಟ ದೊಡ್ಡ ದುರಂತಗಳ ಸಾಲಲ್ಲಿ ಇದನ್ನು ಸೇರಿಸಬಹುದು:
2023 ಫೆಬ್ರವರಿ 12 ರಂದು IIT-ಬಾಂಬೆಯ 18ರ ಹರೆಯದ ವಿದ್ಯಾರ್ಥಿ ದರ್ಶನ್ ಸೋಲಂಕಿಯ ಶರೀರವು ಆತನ ಹಾಸ್ಟೆಲ್ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಯಿತು. ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ ಸೋಲಂಕಿ, ಆ ಸಂಸ್ಥೆಯನ್ನು ಸೇರಿ ಆಗಿನ್ನೂ ಕೇವಲ ಮೂರು ತಿಂಗಳಷ್ಟೇ ಕಳೆದಿದ್ದವು. ಆತನ ಮರಣದ ಕುರಿತು ತನಿಖೆ ನಡೆಸಿ ಮೂರು ವಾರಗಳ ಒಳಗೆ ವರದಿ ಸಲ್ಲಿಸಿದ ಪ್ರಸ್ತುತ ಸಂಸ್ಥೆಯ ಆಂತರಿಕ ಸಮಿತಿಯು, ಶಿಕ್ಷಣ ಸಂಬಂಧಿ ಒತ್ತಡವನ್ನು ಸಹಿಸಲಾಗದೆ ಆತ ಆತ್ಮಹತ್ಯೆ ಮಾಡಿಕೊಂಡನೆಂಬ ನಿರ್ಧಾರಕ್ಕೆ ಬಂತು. ಆದರೆ ಸೋಲಂಕಿಯ ಬಂಧು ಮಿತ್ರರು ಮತ್ತು ಅದೇ ಸಂಸ್ಥೆಯಲ್ಲಿ ಸಕ್ರಿಯವಾಗಿರುವ ಕೆಲವು ವಿದ್ಯಾರ್ಥಿ ಸಂಘಗಳ ಪ್ರಕಾರ ದರ್ಶನ್ ಸಾವಿನ ಹಿಂದಿನ ನೈಜ ಕಥೆ ತೀರಾ ಭಿನ್ನವಾಗಿತ್ತು.
ದರ್ಶನ್ ಸೋಲಂಕಿ ಅಸಾಮಾನ್ಯ ಮಟ್ಟದ ಪ್ರತಿಭಾವಂತನಾಗಿದ್ದ. ಯಾವುದೇ ಖಾಸಗಿ ಕೋಚಿಂಗ್ ಪಡೆಯದೆಯೇ ಎರಡೆರಡು ಬಾರಿ JEE ಪರೀಕ್ಷೆ ಪಾಸಾಗಿದ್ದ. IIT-ಬಾಂಬೆಯಲ್ಲಿ ತನಗೆ ಸೀಟು ಖಾತರಿಯಾದಾಗ ಭಾರೀ ಸಂಭ್ರಮದಲ್ಲಿದ್ದ. ದರ್ಶನ್‌ನ ತಂದೆ ರಮೇಶ್ ಸೋಲಂಕಿ ಗುಜರಾತಿನ ಅಹ್ಮದಾಬಾದ್‌ನಲ್ಲಿ ಪ್ಲಂಬರ್ (plumber) ವೃತ್ತಿಯಲ್ಲಿದ್ದಾರೆ. ತಾಯಿ ಗೃಹಸ್ಥೆ. ದರ್ಶನ್ ಪ್ರಸ್ತುತ ಸಂಸ್ಥೆಗೆ ಸೇರಿದ ಕೆಲವೇ ದಿನಗಳಲ್ಲಿ, ಆತ ಪರಿಶಿಷ್ಟ ಜಾತಿಗೆ ಸೇರಿದವನೆಂಬುದು ಮತ್ತು ಮೀಸಲಾತಿ ಕೋಟಾ ಮೂಲಕ ಸೀಟು ಪಡೆದವನೆಂಬುದು ಆತನ ಕಾಲೇಜು, ಕ್ಲಾಸು ಮತ್ತು ಹಾಸ್ಟೆಲ್‌ನಲ್ಲಿ ಚರ್ಚಾವಿಷಯವಾಗಿ ಬಿಟ್ಟಿತ್ತು. ತನ್ನ ಗುರುತು ತಿಳಿದ ಬಳಿಕ ತನ್ನ ಕೆಲವು ಸಹಪಾಠಿಗಳು ತನ್ನ ವಿರುದ್ಧ ತುಂಬಾ ಅಸಮಾಧಾನವನ್ನು ಪ್ರಕಟಿಸುತ್ತಿದ್ದಾರೆ, ‘ಉಚಿತ ಶಿಕ್ಷಣ ಪಡೆಯುತ್ತಿರುವವನು’ ಎಂದು ತನ್ನನ್ನು ಲೇವಡಿ ಮಾಡುತ್ತಿದ್ದಾರೆ ಮತ್ತು ‘ಮೀಸಲಾತಿಯ ಮೂಲಕ ಸೀಟು ಪಡೆದವನು’ ಎಂದು ಗೇಲಿ ಮಾಡುತ್ತಿದ್ದಾರೆಂದು ಸೋಲಂಕಿ ತಮಗೆ ತಿಳಿಸಿದ್ದನೆಂದು ಅವನ ಹಲವು ಬಂಧು ಮಿತ್ರರು ಹೇಳಿದ್ದಾರೆ.
ಘಟನೆಯ ಬಗ್ಗೆ ತನಿಖೆ ನಡೆಸಿದ ಮುಂಬೈ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡವು (SIT), ದರ್ಶನ್‌ಗೆ ಜಾತಿ ಹೆಸರಲ್ಲಿ ಕಿರುಕುಳ ನೀಡಲಾಗಿತ್ತು ಎಂಬ ಆರೋಪವನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿದ್ದು ಆತನ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಆತನ ಒಬ್ಬ ಸಹಪಾಠಿಯನ್ನು ಬಂಧಿಸಿತ್ತು. ಸಂಸ್ಥೆಯ ಆಂತರಿಕ ಸಮಿತಿಯು ಮಾತ್ರ ತನ್ನ ತನಿಖಾ ವರದಿಯಲ್ಲಿ ಇಂತಹ ಯಾವ ಅಂಶವನ್ನೂ ಪ್ರಸ್ತಾಪಿಸಿರಲಿಲ್ಲ. IIT- ಬಾಂಬೆಯಲ್ಲಿ ಸಕ್ರಿಯವಾಗಿರುವ ‘ಅಂಬೇಡ್ಕರ್, ಪೆರಿಯಾರ್, ಫುಲೆ ಸ್ಟಡಿ ಸರ್ಕಲ್’ (APPSC) ಎಂಬ ವಿದ್ಯಾರ್ಥಿ ಸಂಘಟನೆಯವರು ದರ್ಶನ್ ದುರಂತವನ್ನು ‘ಸಾಂಸ್ಥಿಕ ಹತ್ಯೆ’ ಎಂದು ಕರೆದರು. ‘‘ಹಲವು ಬಾರಿ ದೂರು ನೀಡಿದರೂ ಸಂಸ್ಥೆಯವರು, ತಮ್ಮ ಸ್ಥಳವನ್ನು ದಲಿತರು, ಆದಿವಾಸಿಗಳು ಮತ್ತು ಬಹುಜನರ ಪಾಲಿಗೆ ವಿಶಾಲ ಹಾಗೂ ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ’’ ಎಂದು ಅವರು ಆರೋಪಿಸಿದರು.
IIT-ಬಾಂಬೆಯಲ್ಲಿ ಎಲ್ಲ ಎಸ್‌ಸಿ, ಎಸ್‌ಟಿ ಮತ್ತು ಬಹುಜನ ಸಮಾಜದ ವಿದ್ಯಾರ್ಥಿಗಳ ಪಾಲಿಗೆ ಸುರಕ್ಷಿತ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಸಂಸ್ಥೆಯು ತನ್ನ ಶಿಕ್ಷಕ ವೃಂದದಲ್ಲಿ ಪ್ರಸ್ತುತ ಜಾತಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು APPSC ಕೆಲವು ವರ್ಷಗಳ ಹಿಂದಿನಿಂದಲೇ ಆಗ್ರಹಿಸುತ್ತಾ ಬಂದಿದೆ. 2022ರಲ್ಲಿ ಈ ಸಂಘಟನೆಯ ಸದಸ್ಯರು RTI ಮೂಲಕ ಪಡೆದ ಮಾಹಿತಿಯ ಪ್ರಕಾರ ಆ ವರ್ಷ ಸಂಸ್ಥೆಯಲ್ಲಿ 133 ಹುದ್ದೆಗಳು ಖಾಲಿ ಇದ್ದವು. ಅವುಗಳನ್ನು ತುಂಬುವಾಗ ಎಸ್‌ಸಿ ವರ್ಗಕ್ಕೆ ಸೇರಿದ ಕೇವಲ 9 ಮಂದಿಯನ್ನು ಮಾತ್ರ ನಿಯುಕ್ತಗೊಳಿಸಲಾಗಿತ್ತು. 2023ರಲ್ಲೂ ಈ ಸಂಘಟನೆಯವರು RTI ಮೂಲಕ ಇದೇ ವಿಷಯದ ಕುರಿತು ಮಾಹಿತಿ ಕೇಳಿದ್ದರು. ಆದರೆ IIT-ಬಾಂಬೆಯ ಕಡೆಯಿಂದ ಅವರಿಗೆ ಯಾವುದೇ ಉತ್ತರ ಸಿಕ್ಕಿರಲಿಲ್ಲ.
ದರ್ಶನ್ ದುರಂತವು ತೀರಾ ಅನಿರೀಕ್ಷಿತವೇನೂ ಆಗಿರಲಿಲ್ಲ. ದರ್ಶನ್ ಸಾವಿಗಿಂತ ಸುಮಾರು ಒಂದು ವರ್ಷ ಮುನ್ನವೇ IIT- ಬಾಂಬೆಯ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಘಟಕವು ಕ್ಯಾಂಪಸ್‌ನಲ್ಲಿ ನಡೆಸಿದ್ದ ಒಂದು ಆಂತರಿಕ ಸಮೀಕ್ಷೆಯು, ಅಲ್ಲಿಯ ವಾತಾವರಣವು ದಲಿತ ವಿದ್ಯಾರ್ಥಿಗಳ ಪಾಲಿಗೆ ಎಷ್ಟು ಪ್ರತಿಕೂಲವಾಗಿದೆ ಎಂಬುದನ್ನು ಪುರಾವೆ ಸಹಿತ ಸಾಬೀತು ಪಡಿಸಿತ್ತು. ಪ್ರಸ್ತುತ ಸಮೀಕ್ಷೆ ನಡೆದ 2022ರಲ್ಲಿ IIT-ಬಾಂಬೆಯಲ್ಲಿ ಕನಿಷ್ಠ 10 ಸಾವಿರ ವಿದ್ಯಾರ್ಥಿಗಳಿದ್ದರು. ಅವರಲ್ಲಿ ಸುಮಾರು ಶೇ. 20 ಮಂದಿ ದಲಿತ ಸಮುದಾಯಗಳಿಗೆ ಸೇರಿದವರಾಗಿದ್ದರು. ಆ ಪೈಕಿ 388 ದಲಿತ ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರಲ್ಲಿ ಶೇ. 65 ಮಂದಿ ಪುರುಷ ವಿದ್ಯಾರ್ಥಿಗಳಾಗಿದ್ದರು. ಸಮೀಕ್ಷೆಯಿಂದ ತಿಳಿದು ಬಂದ ಕೆಲವು ಪ್ರಮುಖ ಅಂಶಗಳು ಹೀಗಿದ್ದವು:
‘‘ಹೆಚ್ಚಿನ ವಿದ್ಯಾರ್ಥಿಗಳಲ್ಲಿ, ವಿಶೇಷವಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ ಮೀಸಲಾತಿಯ ವಿರುದ್ಧ ತೀವ್ರ ಆಕ್ರೋಶವಿದೆ’’ ಎಂಬುದು ಅನೇಕ ದಲಿತ ವಿದ್ಯಾರ್ಥಿಗಳ ಅಭಿಪ್ರಾಯವಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳ ಪ್ರಕಾರ, ದಲಿತ ವಿದ್ಯಾರ್ಥಿಗಳನ್ನು ಪೀಡಿಸುವ ಪ್ರಕ್ರಿಯೆಯು, ಓಪನ್ ಕೆಟಗರಿ (ಒಸಿ)ಯ ವಿದ್ಯಾರ್ಥಿಗಳು, ಮೀಸಲಾತಿ ಕೋಟಾದಿಂದ ಬಂದ ವಿದ್ಯಾರ್ಥಿಗಳೊಡನೆ, ಎರಡು ಪ್ರಶ್ನೆಗಳನ್ನು ಕೇಳುವ ಮೂಲಕ ಆರಂಭವಾಗುತ್ತದೆ.
1. ನಿಮ್ಮ ಕುಲನಾಮ ಏನು?
2. JEEಯಲ್ಲಿ ನಿಮ್ಮ ರ್ಯಾಂಕ್ ಎಷ್ಟು?
‘‘ಈ ಎರಡು ಪ್ರಶ್ನೆಗಳನ್ನು ದಲಿತ ವಿದ್ಯಾರ್ಥಿಗಳು ಮೊದಲ ದಿನವೇ ಎದುರಿಸಬೇಕಾಗುತ್ತದೆ. ಮುಂದೆ ನಮ್ಮ ಜೊತೆ ಇತರರ ವರ್ತನೆ ಹೇಗಿರುತ್ತದೆಂಬುದು ಈ ಎರಡು ಪ್ರಶ್ನೆಗಳಿಗೆ ನಾವು ನೀಡುವ ಉತ್ತರವನ್ನು ಅವಲಂಬಿಸಿರುತ್ತದೆ. ಕ್ರಮೇಣ ನಮ್ಮ ಮುಂದೆ ಮೀಸಲಾತಿಯ ಕುರಿತು ಚರ್ಚೆಗಳು ನಡೆಯುತ್ತವೆ ಮತ್ತು ಮೀಸಲಾತಿಯನ್ನು ಬಹಳ ಉಗ್ರವಾಗಿ ಖಂಡಿಸಲಾಗುತ್ತದೆ. ಈ ಕಾರ್ಯ ಆನ್ ಲೈನ್ ಮತ್ತು ಆಫ್ ಲೈನ್ - ಎರಡೂ ವಿಧದಲ್ಲಿ ನಡೆಯುತ್ತದೆ. .... ಹೊಸ ವಿದ್ಯಾರ್ಥಿಗಳು ಸಿಕ್ಕಾಗ ನಮ್ಮೊಡನೆ ನಮ್ಮ ಹೆಸರೇನೆಂದು ಕೇಳುತ್ತಾರೆ. ಹೆಸರಿನ ಮೊದಲ ಭಾಗವನ್ನು ಹೇಳಿದರೆ, ನಿಮ್ಮ ಸರ್‌ನೇಮ್ ಅಥವಾ ಕುಲನಾಮ ಏನೆಂದು ವಿಚಾರಿಸುತ್ತಾರೆ. ಇದರಿಂದ ನಮಗೆ ತೀವ್ರ ಕಸಿವಿಸಿಯಾಗುತ್ತದೆ. ದುಃಖವಾಗುತ್ತದೆ’’ - ಇದು ಒಬ್ಬ ವಿದ್ಯಾರ್ಥಿಯ ಪ್ರತಿಕ್ರಿಯೆಯಾಗಿತ್ತು. ಸಮೀಕ್ಷೆಯ ಭಾಗವಾಗಿ ಕೇಳಲಾದ ಪ್ರಶ್ನೆಗಳಿಗೆ ಇತರ ಕೆಲವು ದಲಿತ ವಿದ್ಯಾರ್ಥಿಗಳಿಂದ ಬಂದ ಪ್ರತಿಕ್ರಿಯೆಗಳು ಹೀಗಿದ್ದವು (ಸಾರಾಂಶ):
‘‘ನಮ್ಮ ಸಹಪಾಠಿಗಳಿಗೆ ನಮ್ಮ ಜಾತಿ ಯಾವುದೆಂದು ತಿಳಿದೊಡನೆ ಅವರ ಪ್ರವೃತ್ತಿ ಬದಲಾಗಿ ಬಿಡುತ್ತದೆ. ನಾನು ಕಡಿಮೆ ರ್ಯಾಂಕ್ ಪಡೆದವನೆಂಬ ಕಾರಣಕ್ಕೆ ನನ್ನ ಜೊತೆಗಾರರು, ನನ್ನೊಡನೆ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಕುರಿತು ಚರ್ಚಿಸುವುದಿಲ್ಲ. ಅವರು ಪರಸ್ಪರ ಚರ್ಚಿಸುತ್ತಿರುವಾಗ ನಾವು ಅವರ ಬಳಿಗೆ ಹೋದರೆ ಅವರು ಮೌನವಾಗಿ ಬಿಡುತ್ತಾರೆ ಅಥವಾ ಆ ತಮ್ಮ ಚರ್ಚೆಯನ್ನೇ ನಿಲ್ಲಿಸಿಬಿಡುತ್ತಾರೆ. ನಮ್ಮ ಅಭಿಪ್ರಾಯಕ್ಕೆ ಯಾವ ಬೆಲೆಯೂ ಇರುವುದಿಲ್ಲ.’’
‘‘ಸಾಮಾನ್ಯವಾಗಿ ಹಾಸ್ಟೆಲ್ ಕೋಣೆಗಳನ್ನು ವಿತರಿಸುವಾಗ ಓಪನ್ ಕೆಟಗರಿಯ ಒಬ್ಬ ಹಾಗೂ ಮೀಸಲಾತಿ ಕೆಟಗರಿಯ ಒಬ್ಬ ವಿದ್ಯಾರ್ಥಿಗೆ ಒಂದೇ ಕೋಣೆಯಲ್ಲಿ ಜಾಗ ನೀಡುವ ನಿಯಮ ಇದೆ. ಆದರೆ ಓಪನ್ ಕೆಟಗರಿಯ ವಿದ್ಯಾರ್ಥಿಗಳು ನಮ್ಮ ಜೊತೆ ಕೋಣೆ ಹಂಚಿಕೊಳ್ಳುವುದನ್ನು ಇಷ್ಟಪಡುವುದಿಲ್ಲ.’’
‘‘ಓಪನ್ ಕೆಟಗರಿಯವರು ತಮ್ಮ ಮಿತ್ರಬಳಗದಲ್ಲಿ ನಮ್ಮನ್ನು ಸೇರಿಸಿಕೊಳ್ಳುವುದಿಲ್ಲ. ಲ್ಯಾಬ್‌ನಲ್ಲಿ ಗ್ರೂಪ್ ಅಸೈನ್‌ಮೆಂಟ್ ಇರುವಾಗ ಅವರ ಗ್ರೂಪ್‌ಗಳಿಂದ ನಮ್ಮನ್ನು ಹೊರಗಿಡುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕೂಡಾ ನಾವು ‘ಫ್ರೆಂಡ್ ರಿಕ್ವೆಸ್ಟ್’ ಕಳಿಸಿದರೆ ಓಪನ್ ಕೆಟಗರಿಯವರು ಅದನ್ನು ಸ್ವೀಕರಿಸುವುದಿಲ್ಲ.’’
‘‘ನಾವು ಯಾವಾಗಲೂ ವ್ಯಂಗ್ಯ ಹಾಗೂ ಚುಚ್ಚು ಮಾತುಗಳನ್ನು ಕೇಳುತ್ತಲೇ ಇರಬೇಕಾಗುತ್ತದೆ. ಎಸ್‌ಸಿ, ಎಸ್‌ಟಿಯವರಿಗೆ ಎಷ್ಟೇ ಆದಾಯ ಇದ್ದರೂ ಅವರು ಟ್ಯೂಷನ್ ಫೀಸ್ ಪಾವತಿಸಬೇಕಾಗಿಲ್ಲ - ಎಂದು ಪದೇ ಪದೇ ನಮಗೆ ನೆನಪಿಸಲಾಗುತ್ತದೆ. ನೀವೆಲ್ಲಾ ದೊಡ್ಡ ಮನುಷ್ಯರು. ನಿಮಗೆ ಅಡ್ಮಿಷನ್ ಉಚಿತ. ಟ್ಯೂಶನ್ ಫೀಸ್ ಕೂಡಾ ಕೊಡಬೇಕಾಗಿಲ್ಲ - ಎಂಬ ಟಾಂಟ್ ಕೇಳುತ್ತಿರಬೇಕಾಗುತ್ತದೆ.’’
‘‘ಕ್ಯಾಂಪಸ್‌ನೊಳಗೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾತಿವಾದಿ ಮೀಮ್‌ಗಳು ಮತ್ತು ಪೋಸ್ಟ್‌ಗಳು ಸದಾ ಚಲಾವಣೆಯಲ್ಲಿರುತ್ತವೆ. ಮೀಸಲಾತಿಯನ್ನು ವಿರೋಧಿಸುವ ಬರಹಗಳು ವಾಟ್ಸ್‌ಆ್ಯಪ್ ಮೂಲಕ ಹರಿದಾಡುತ್ತಿರುತ್ತವೆ. ಮೀಸಲಾತಿ ಕೆಟಗೆರಿಯವರು ತೆರಿಗೆದಾರರ ಹಣವನ್ನು ಪೋಲುಮಾಡುತ್ತಿದ್ದಾರೆ ಎಂಬ ಚುಚ್ಚು ಮಾತನ್ನು ನನ್ನ ಅನೇಕ ಮಿತ್ರರು ಕೇಳಿದ್ದಾರೆ. ಎಲ್ಲರ ಮುಂದೆ ಇಂತಹ ಮಾತುಗಳನ್ನು ಕೇಳುವಾಗ ತುಂಬಾ ಸಂಕಟವಾಗುತ್ತದೆ.’’
‘‘ಕ್ಯಾಂಪಸ್‌ನ ವ್ಯವಸ್ಥೆಯೊಳಗೇ ಜಾತಿಯನ್ನು ಗುರುತಿಸಿ ತಾರತಮ್ಯ ಮಾಡುವುದಕ್ಕೆ ಅವಕಾಶಗಳನ್ನು ನೀಡಲಾಗಿದೆ. ನಿರ್ದಿಷ್ಟ ಹೊಣೆಗಳನ್ನು ನೀಡುವಾಗ ಅಥವಾ ಯಾವುದಾದರೂ ವಿಷಯದಲ್ಲಿ ಡೇಟಾ ಸಂಗ್ರಹಿಸಬೇಕಾದಾಗ ಎಲ್ಲರಿಗೂ ಒಂದೇ ಬಗೆಯ ಶೀಟ್‌ಗಳನ್ನೂ ನೀಡಲಾಗುತ್ತದೆ. ಆದರೆ ಅದರಲ್ಲಿ ಕೆಟಗರಿ ಎಂಬೊಂದು ಕಾಲಂ ಇದೆ. ಅದನ್ನು ಕಡ್ಡಾಯವಾಗಿ ತುಂಬಲೇ ಬೇಕು. ನಿಜವಾಗಿ ಅಲ್ಲಿ ಅಂತಹ ಒಂದು ಕಾಲಂನ ಯಾವ ಅಗತ್ಯವೂ ಇಲ್ಲ. ನಾನು ಇದರ ವಿರುದ್ಧ ಮಾತನಾಡಿದ್ದೆ. ಆದರೆ ಪ್ರಯೋಜನವಾಗಲಿಲ್ಲ. ವಂಚಿತಜಾತಿಗಳ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಗುರುತಿಸುವುದಕ್ಕಾಗಿಯೇ ಇಂತಹ ಏರ್ಪಾಡು ಮಾಡಲಾಗಿದೆ. ಈ ರೀತಿ ನಮ್ಮನ್ನು ಪ್ರತ್ಯೇಕವಾಗಿ ಗುರುತಿಸುವುದಕ್ಕೆ ಇನ್ನೂ ಅನೇಕ ಏರ್ಪಾಡುಗಳನ್ನು ಸಂಸ್ಥೆಯೇ ಮಾಡಿದೆ.’’
‘‘ಸಂಸ್ಥೆಯಲ್ಲಿ ದಾಖಲಾದ ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ರೋಲ್ ನಂಬರ್‌ಗಳನ್ನು ನೀಡಲಾಗುತ್ತದೆ. ಆ ಹಂತದಲ್ಲಿ ಆರಂಭದ ನಂಬರ್‌ಗಳನ್ನು ಎಸ್‌ಸಿ ಮತ್ತು ಎಸ್‌ಟಿ ವರ್ಗದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ರೀತಿ ಅವರ ಜಾತಿಯನ್ನು ಗುರುತಿಸಲು ನೆರವಾಗುವಂತಹ ರೋಲ್ ನಂಬರ್‌ಗಳನ್ನೂ ನೀಡುವುದೇಕೆ? ಇದು ಉದ್ದೇಶಪೂರ್ವಕವಾಗಿ, ಜಾತಿಗುರುತನ್ನು ಅರಿತು ಹಣೆಪಟ್ಟಿ ಕಟ್ಟುವುದಕ್ಕಾಗಿಯೇ ಕಂಡುಕೊಳ್ಳಲಾಗಿರುವ, ಸೂಕ್ಷ್ಮ ಸ್ವರೂಪದ ಅದೃಶ್ಯ ಹಾಗೂ ಅನಧಿಕೃತ ವಿಧಾನವೆಂದು ನನಗೆ ಅನಿಸುತ್ತಿದೆ.’’
‘‘ಮೀಸಲಾತಿ ಕೆಟಗರಿಯ ವಿದ್ಯಾರ್ಥಿಗಳು ಅನರ್ಹರು ಮತ್ತು ಮೀಸಲಾತಿ ಎಂಬ ಸವಲತ್ತಿನ ಅಗತ್ಯವೇ ಇಲ್ಲ ಎಂಬುದು ಹೆಚ್ಚಿನ ವಿದ್ಯಾರ್ಥಿಗಳ ನಂಬಿಕೆಯಾಗಿದೆ.’’
‘‘IITಗಳಲ್ಲಿರುವ ಎಸ್‌ಸಿ/ಎಸ್‌ಟಿ ಸೆಲ್‌ಗಳು ಪ್ರಥಮ ವರ್ಷದ ವಿದ್ಯಾರ್ಥಿಗಳ ಒತ್ತಡಗಳನ್ನು ಕಡಿಮೆಗೊಳಿಸುವುದಕ್ಕೆ ಮತ್ತು ಅವರು ಹಿರಿಯ ವಿದ್ಯಾರ್ಥಿಗಳು ಹೇರುವ ವಿಪರೀತ ಸ್ಪರ್ಧೆಯ ವಾತಾವರಣವನ್ನು ಮೀರಿ ತಮ್ಮ ಗಮನವನ್ನು ಸಂಪೂರ್ಣವಾಗಿ ಶಿಕ್ಷಣದ ಕಡೆಗೆ ಕೇಂದ್ರೀಕರಿಸುವುದಕ್ಕೆ ನೆರವಾಗುವ ಯೋಜನೆಗಳನ್ನು ರೂಪಿಸಬೇಕು.’’
‘‘ಶೈಕ್ಷಣಿಕ ಸವಾಲುಗಳಿಗೆ ಹೋಲಿಸಿದರೆ ನಾವು ಕೆಳಜಾತಿಗೆ ಸೇರಿದವರು ಎಂಬ ಪ್ರಜ್ಞೆಯು ತೀವ್ರ ಸ್ವರೂಪದ ಮಾನಸಿಕ ಕಿರುಕುಳ ಉಂಟು ಮಾಡುತ್ತದೆ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯುಂಟಾದಾಗ ನಮ್ಮ ಸತತ ಬೆಳವಣಿಗೆಯ ಇಂಡೆಕ್ಸ್ (CPI) ಬಾಧಿತವಾಗುತ್ತದೆ ಮತ್ತು ನಮ್ಮ ಒಟ್ಟು ಬೆಳವಣಿಗೆ ಕುಂಠಿತವಾಗುತ್ತದೆ.’’
‘‘ಎಸ್‌ಸಿ ಮತ್ತು ಎಸ್‌ಟಿ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಸುಲಲಿತ ಸಂವಹನ ನಡೆಸುವುದಕ್ಕೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದಕ್ಕೆ ಸಹಾಯಕವಾಗುವ ವಿಶೇಷ ತರಗತಿಗಳನ್ನು ನಡೆಸಬೇಕು.’’
2022ರಲ್ಲಿ, ಪ್ರತಿಷ್ಠಿತ IIT-ಬಾಂಬೆ ಸಂಸ್ಥೆಯಲ್ಲಿ ಕಲಿಯುತ್ತಿರುವ ದಲಿತ ವಿದ್ಯಾರ್ಥಿಗಳನ್ನು ಕೇಂದ್ರವಾಗಿಸಿ ಒಂದು ಸಮೀಕ್ಷೆಯನ್ನು ನಡೆಸಲಾಯಿತು. ಪ್ರಸ್ತುತ ಸಮೀಕ್ಷೆಯಿಂದ ತಿಳಿದು ಬಂದ ಕೆಲವು ಮಹತ್ವದ ಅಂಶಗಳು ಹೀಗಿದ್ದವು:
* ಸಮೀಕ್ಷೆಗೊಳಪಟ್ಟ ಒಟ್ಟು 388 ದಲಿತ ವಿದ್ಯಾರ್ಥಿಗಳ ಪೈಕಿ ಶೇ. 25 ಮಂದಿ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಕಲಿತವರಲ್ಲ.
* ಸಮೀಕ್ಷೆಗೊಳಗಾದ ದಲಿತ ವಿದ್ಯಾರ್ಥಿಗಳ ಪೈಕಿ ಶೇ. 22 ಮಂದಿ ತಮ್ಮ ಕುಟುಂಬದ ಪ್ರಥಮ ಪದವೀಧರರಾಗಿದ್ದರು.
* IIT- ಬಾಂಬೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ವಿದ್ಯಾರ್ಥಿಗಳ ಹಿತರಕ್ಷಣೆಗೆಂದೇ ಒಂದು ಘಟಕವಿದೆ. ಆದರೆ ಪ್ರಸ್ತುತ ವರ್ಗಗಳಿಗೆ ಸೇರಿದ ಶೇ. 25 ವಿದ್ಯಾರ್ಥಿಗಳು ತಮ್ಮ ಜಾತಿಗುರುತು ಬಹಿರಂಗವಾಗುತ್ತದೆಂಬ ಭಯದಿಂದ ಆ ಘಟಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸುವುದಿಲ್ಲ.
* ಶೇ. 15.5 ದಲಿತ ವಿದ್ಯಾರ್ಥಿಗಳು, ಕ್ಯಾಂಪಸ್‌ನಲ್ಲಿ ತಾವು ಎದುರಿಸಿದ ಜಾತಿಯಾಧಾರಿತ ತಾರತಮ್ಯದಿಂದಾಗಿ ತಮಗೆ ಮಾನಸಿಕ ಅಸ್ವಾಸ್ಥ್ಯ ಉಂಟಾಗಿದೆ ಎಂದು ದೂರಿದ್ದಾರೆ.
* ನಮ್ಮ ಜಾತಿಗುರುತನ್ನು ಪತ್ತೆಹಚ್ಚಲಿಕ್ಕಾಗಿ ನಮ್ಮ ಹಲವು ಸಹಪಾಠಿಗಳು ನಮ್ಮೊಡನೆ ನಮ್ಮ JEE/GATE/JAM/(U)CEED ್ಯಾಂಕ್ ಕುರಿತು ವಿಚಾರಿಸಿದ್ದಾರೆ ಎಂದು ಸುಮಾರು ಶೇ. 37 ವಿದ್ಯಾರ್ಥಿಗಳು ದೂರಿದ್ದಾರೆ.
* ನಮ್ಮ ಸಹಪಾಠಿಗಳು, ನಮ್ಮ ಜಾತಿ ಯಾವುದೆಂಬುದನ್ನು ಅರಿಯಲಿಕ್ಕಾಗಿ ನಮ್ಮೊಡನೆ ನಮ್ಮ ಕುಲನಾಮ (surname) ಕುರಿತು ವಿಚಾರಿಸಿದ್ದಾರೆಂದು ಶೇ. 26 ದಲಿತ ವಿದ್ಯಾರ್ಥಿಗಳು ದೂರಿದ್ದಾರೆ.
* ನಾವು ಜಾತಿ ಆಧಾರಿತ ತಾರತಮ್ಯದ ವಿರುದ್ಧ ಮಾತನಾಡಿದರೆ, ಶಿಕ್ಷಕ ವೃಂದದವರು ನಮ್ಮ ವಿರುದ್ಧ ಪ್ರತೀಕಾರ ಎಸಗಬಹುದೆಂಬ ಭಯ ನಮಗಿದೆ ಎಂದು ಶೇ. 21.6 ವಿದ್ಯಾರ್ಥಿಗಳು ಹೇಳಿದ್ದಾರೆ.
* ಕ್ಯಾಂಪಸ್‌ನಲ್ಲಿ ಎಸ್‌ಸಿ ಮತ್ತು ಎಸ್‌ಟಿ ವರ್ಗಗಳ ವಿದ್ಯಾರ್ಥಿಗಳ ಹಿತರಕ್ಷಣೆಗಾಗಿರುವ ಘಟಕವು ಸದ್ಯ ಸಲ್ಲಿಸುತ್ತಿರುವ ಸೇವೆ ಸಾಲದು. ಅದು ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡಬೇಕಿದೆ ಎಂಬುದು ಶೇ. 31.2 ವಿದ್ಯಾರ್ಥಿಗಳ ಅನಿಸಿಕೆಯಾಗಿದೆ.







