ಅರಾಜಕತೆಯ ಘೋಷಣೆ: ಹೇಡಿಗಳು ಜಾರಿಗೊಳಿಸುವ ಈ ಅನಧಿಕೃತ ‘ಮರಣದಂಡನೆ’ಗಳು

ಸರಕಾರ ಸಕ್ರಿಯವಾಗಿರುವ ಮತ್ತು ನಾಗರಿಕರು ಸಂವೇದನಾಶೀಲರಾಗಿರುವ ಯಾವುದೇ ಸಮಾಜದಲ್ಲಿ ಇಂತಹ ಕರಾಳ ಶಕ್ತಿಪ್ರದರ್ಶನ ಅಥವಾ ಶೌರ್ಯ ಪ್ರದರ್ಶನ ಖಂಡಿತ ಸಾಧ್ಯವಾಗುವುದಿಲ್ಲ. ಸರಕಾರಗಳು ದುರ್ಬಲ ಹಾಗೂ ನಿಷ್ಕ್ರಿಯವಾಗಿರುವಲ್ಲಿ ಮತ್ತು ನಾಗರಿಕರು, ತಮ್ಮ ಕಣ್ಣ ಮುಂದೆ ಯಾರ ಮೇಲಾದರೂ ಅನ್ಯಾಯ ನಡೆಯುತ್ತಿರುವುದನ್ನು ಕಂಡಾಗ ಅದನ್ನು ವಿರೋಧಿಸುವ ಬದಲು, ಅದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಶವಗಳಂತೆ ಮೌನವಾಗಿ ಹಾದು ಹೋಗುವಷ್ಟು ನಿಸ್ತೇಜ, ನಿರ್ಲಿಪ್ತ ಹಾಗೂ ನಿರ್ಜೀವರಾಗಿರುವಲ್ಲಿ ಮಾತ್ರ ಇದೆಲ್ಲಾ ಸಾಧ್ಯವಾಗುತ್ತದೆ.
ಈ2025ನೇ ವರ್ಷದ ಶುಭಾರಂಭ ಹೇಗಾಯಿತು ನೋಡಿ.
ಜನವರಿ 1ರಂದು ಹಲವು ಮಾಧ್ಯಮಗಳಲ್ಲಿ ಉತ್ತರ ಪ್ರದೇಶ ಎಂಬ ಆದರ್ಶ ರಾಮರಾಜ್ಯಕ್ಕೆ ಸಂಬಂಧಿಸಿದ ಒಂದು ಸುದ್ದಿ ಪ್ರಮುಖವಾಗಿ ಪ್ರಕಟವಾಗಿತ್ತು. ಕೇಸರಿ ಕಿಡಿಗೇಡಿಗಳ ಪಡೆಯೊಂದು, ಗೋಹತ್ಯೆಯ ಆರೋಪ ಹೊರಿಸಿ 37ರ ಹರೆಯದ ಶಾಹಿದ್ ಖುರೈಷಿ ಎಂಬ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ ಕೊಂದು ಹಾಕಿದ್ದರು.
ಇದು ವರ್ಷಾರಂಭದ ಕಥೆಯಾದರೆ, ಈ ತಿಂಗಳ ಆರಂಭ ಹೇಗಾಯಿತು ಎಂಬ ಕಥೆ ಕೂಡಾ ಹೆಚ್ಚೇನೂ ಭಿನ್ನವಾಗಿಲ್ಲ.
ತಿಂಗಳ ಮೊದಲ ದಿನ ಅದೇ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮಾನಸಿಕ ಅಸ್ವಾಸ್ಥ್ಯದಿಂದ ನರಳುತ್ತಿದ್ದ ಹರಿ ಓಂ ವಾಲ್ಮೀಕಿ ಎಂಬ 38ರ ಹರೆಯದ ದಲಿತನೊಬ್ಬನ ಗುಂಪು ಹತ್ಯೆ ನಡೆಯಿತು. ಆಗ ಊರಲ್ಲಿ, ಕೆಲವರು ಹಗಲಲ್ಲಿ ಡ್ರೋನ್‌ಗಳ ಮೂಲಕ ಊರಿನ ವಿವಿಧ ಪ್ರದೇಶಗಳ ಸಮೀಕ್ಷೆ ನಡೆಸಿ, ಆ ಸಮೀಕ್ಷೆಯ ಆಧಾರದಲ್ಲಿ, ಎಲ್ಲಿ ಕಳ್ಳತನ ಅಥವಾ ದರೋಡೆ ನಡೆಸಬೇಕೆಂದು ನಿರ್ಧರಿಸಿ ರಾತ್ರಿ ಅಪರಾಧ ಕೃತ್ಯಗಳನ್ನು ನಡೆಸುತ್ತಾರೆ ಎಂಬ ವದಂತಿ ಹಬ್ಬಿತ್ತು. ಕೆಲವರು ‘ಡ್ರೋನ್ ಕಳ್ಳ’ ಎಂಬ ಸಂಶಯದಿಂದ ಮುಗ್ಧ ಹರಿ ಓಂನನ್ನು ಹಿಡಿದು ಮೊದಲು ‘ವಿಚಾರಣೆ’ ಆರಂಭಿಸಿ ಆತನನ್ನು ಥಳಿಸತೊಡಗಿದರು. ತಾನು ಕಳ್ಳನಲ್ಲ ತನ್ನನ್ನು ಬಿಟ್ಟುಬಿಡಿ ಎಂದು ಹರಿ ಓಂ ಪರಿಪರಿಯಾಗಿ ಬೇಡಿಕೊಂಡರೂ ಹೊಡೆತ ಮುಂದುವರಿಯಿತು. ಈ ನಡುವೆ ಹರಿ ಓಂ ತಾನು ರಾಹುಲ್ ಗಾಂಧಿಯ ಪಕ್ಷದವನು ಎಂದು ಹೇಳಿದ್ದು ಆತನ ಪಾಲಿಗೆ ಮಾರಕವಾಗಿ ಬಿಟ್ಟಿತು. ‘‘ನೀನು ರಾಹುಲ್ ಕಡೆಯವನಾದರೆ ನಾವು ಯೋಗಿ ಕಡೆಯವರು’’ ಎಂದು ಹೇಳುತ್ತಾ ಕಿಡಿಗೇಡಿಗಳು ತಮ್ಮ ಹಿಂಸೆಯನ್ನು ತೀವ್ರಗೊಳಿಸಿದರು. ಕೊನೆಗೆ ಹರಿ ಓಂ ತೀರಾ ನಿಶ್ಚಲನಾಗಿ ಬಿಟ್ಟಾಗ ಅವನ ಶರೀರವನ್ನು ರೈಲ್ವೆ ಹಳಿಯ ಬಳಿ ಎಸೆದು ಕಿಡಿಗೇಡಿಗಳು ಹೊರಟುಹೋದರು. ಮೃತನ ಬಂಧುಗಳು ಮತ್ತು ದುರಂತದ ಕೆಲವು ವೀಕ್ಷಕರ ಪ್ರಕಾರ, ಮೊದಲು ಕೆಲವು ಪೊಲೀಸ್ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡು ಆ ಬಳಿಕ ಕಿಡಿಗೇಡಿ ಗುಂಪಿನ ಕೈಗೆ ಒಪ್ಪಿಸಿದ್ದರು ಮತ್ತು ಪೊಲೀಸರ ಉಪಸ್ಥಿತಿಯಲ್ಲೇ ಕಿಡಿಗಳು ಆತನನ್ನು ಕ್ರೂರವಾಗಿ ಥಳಿಸಿ ಕೊಂದಿದ್ದರು.
ಮೊನ್ನೆಯಷ್ಟೇ (ಅಕ್ಟೊಬರ್ 7) ಉತ್ತರಪ್ರದೇಶದ ಶಾಹ್‌ಜಹಾನ್‌ಪುರದಲ್ಲಿ ಅನುಕೂಲಸ್ಥರ ಬಡಾವಣೆಯೊಂದರಲ್ಲಿ ಭದ್ರತಾ ಸಿಬ್ಬಂದಿ ಒಬ್ಬ ಅಜ್ಞಾತ ವ್ಯಕ್ತಿಯನ್ನು ಕಳ್ಳನಿರಬಹುದು ಎಂಬ ಸಂಶಯದ ಮೇಲೆ ಹಿಡಿದು ಕೈಕಾಲುಗಳನ್ನು ಕಟ್ಟಿ ಮನಬಂದಂತೆ ಹೊಡೆದರು. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಸುಮಾರು 40 ವರ್ಷದ ಆ ವ್ಯಕ್ತಿ ಶವವಾಗಿ ಬಿಟ್ಟಿದ್ದ.
ಕಳೆದ ಆಗಸ್ಟ್ ತಿಂಗಳಲ್ಲಿ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ 20ರ ಹರೆಯದ ಸುಲೇಮಾನ್ ಖಾನ್ ಎಂಬೊಬ್ಬ ತರುಣ 17ರ ಹರೆಯದ ಒಬ್ಬ ತರುಣಿಯ ಜೊತೆ ಒಂದು ಕೆಫೆಯಲ್ಲಿ ಉಪಾಹಾರ ಸೇವಿಸುತ್ತಿದ್ದ. ಕಿಡಿಗೇಡಿಗಳ ಗುಂಪೊಂದು ಅವನನ್ನು ಹಿಡಿದು ಥಳಿಸತೊಡಗಿತು. ಥಳಿತ ಎಷ್ಟು ತೀವ್ರವಾಗಿತ್ತೆಂದರೆ, ಮೂರ್ಛೆಹೋಗಿದ್ದ ಖಾನ್, ಆಸ್ಪತ್ರೆ ತಲುಪುವ ಮುನ್ನವೇ ಪ್ರಾಣ ಕಳೆದುಕೊಂಡಿದ್ದ.
ಅದೇ ತಿಂಗಳಲ್ಲಿ ದೇಶದ ರಾಜಧಾನಿಗೆ ಸಮೀಪದ ಆರ್ಯನ್ ಮಿಶ್ರಾ ಎಂಬ 12ನೇ ಕ್ಲಾಸಿನ ಒಬ್ಬ ವಿದ್ಯಾರ್ಥಿಯ ದಾರುಣ ಗುಂಪು ಹತ್ಯೆ ನಡೆಯಿತು. ಆತ ತನ್ನ ಇಬ್ಬರು ಮಿತ್ರರ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. 5 ಮಂದಿ ಕಿಡಿಗೇಡಿಗಳ ತಂಡವೊಂದು ಇನ್ನೊಂದು ಕಾರಿನಲ್ಲಿ ಬೆನ್ನಟ್ಟಿ ಬಂದು ತಮ್ಮ ವಾಹನವನ್ನು ನಿಲ್ಲಿಸಲು ಸೂಚಿಸುತ್ತಿರುವುದನ್ನು ಅವರು ಗಮನಿಸಿದರು. 25 ಕಿ.ಮೀ.ವರೆಗೂ ಅವರ ಕಾರನ್ನು ಹಿಂಬಾಲಿಸಿ ಬಂದ ತಂಡವು ಅವರನ್ನು ತಡೆದು ಕಾರಲ್ಲಿದ್ದವರ ಮೇಲೆ ಗುಂಡಿನ ದಾಳಿ ನಡೆಸಿತು. ದಾಳಿಯಲ್ಲಿ ಆರ್ಯನ್ ಮಿಶ್ರಾ ತೀವ್ರ ಗಾಯಗೊಂಡು ಅಸುನೀಗಿದ. ಮುಂದೆ ಬಂಧಿತರಾದ ಕಿಡಿಗೇಡಿಗಳು ತಾವು ಮಿಶ್ರಾ ಮತ್ತಾತನ ಮಿತ್ರರು ಗೋಸಾಗಾಟ ಮಾಡುತ್ತಿದ್ದಾರೆಂಬ ಶಂಕೆಯಿಂದ ಅವರನ್ನು ಬೆನ್ನಟ್ಟಿ ಹೋಗಿ ದಾಳಿ ಮಾಡಿದ್ದಾಗಿ ಒಪ್ಪಿಕೊಂಡರು.
ಗೋಸಾಗಾಟ ಅಥವಾ ಗೋಮಾಂಸ ಬಳಕೆಯ ಹೆಸರಲ್ಲಿ ಗುಂಪು ಹತ್ಯೆ ಭಾರತದಲ್ಲಿಂದು ತೀರಾ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ‘ಬೀಫ್ ಲಿಂಚಿಂಗ್’ ಎಂಬ ಹೆಸರೂ ಇದೆ. ಹಲವೊಮ್ಮೆ ಈ ಕೃತ್ಯಗಳು ಸಮಾಜವನ್ನು ಧ್ರುವೀಕರಿಸುವ ಮೂಲಕ ಅಧಿಕಾರಕ್ಕೇರುವ ರಾಜಕೀಯ ಅಜೆಂಡಾದ ಭಾಗವಾಗಿರುತ್ತವೆ. ಗುಂಪುಹತ್ಯೆಯನ್ನು ಸುಗಮಗೊಳಿಸುವುದಕ್ಕಾಗಿಯೇ ಉದ್ವಿಗ್ನತೆಯನ್ನು ಸೃಷ್ಟಿಸುವ ಯೋಜಿತ ಚಟುವಟಿಕೆಗಳು ಬಹಿರಂಗವಾಗಿಯೇ ನಡೆಯುತ್ತವೆ. ಹೆಚ್ಚಿನ ಪ್ರಕರಣಗಳಲ್ಲಿ ಹಂತಕರಿಗೆ ಬಲಿಷ್ಠ ರಾಜಕೀಯ ಪಕ್ಷಗಳ, ಪೊಲೀಸ್ ಇಲಾಖೆಯೊಳಗಿನ ಮಾನವ ವಿರೋಧಿ ಮನುವಾದಿಗಳ, ಮಾತ್ರವಲ್ಲ, ಹಲವೊಮ್ಮೆ ಸಾಕ್ಷಾತ್ ಆಡಳಿತಗಾರರ ಶ್ರೀರಕ್ಷೆ ಪ್ರಾಪ್ತವಾಗಿರುತ್ತದೆ. ಆದ್ದರಿಂದ ಅವರಿಗೆ ಶಿಕ್ಷೆಯಾಗುವ ಸಾಧ್ಯತೆ ತೀರಾ ಕನಿಷ್ಠವಾಗಿರುತ್ತದೆ. ಸಾಲದ್ದಕ್ಕೆ ಅವರ ಅಪರಾಧವು ಅವರ ಪಾಲಿಗೆ ರಾಜಕೀಯ ಕ್ಷೇತ್ರದಲ್ಲಿ ಉನ್ನತಿಗೇರುವ ಏಣಿಯಾಗಿ ಬಿಡುತ್ತದೆ. ಈ ಬಗೆಯ ವಾತಾವರಣವು ಗೋರಕ್ಷಣೆಯ ಹೆಸರಲ್ಲಿ ನಡೆಯುವ ಘೋರ ಅಪರಾಧ ಮತ್ತು ಪಾಪಕೃತ್ಯವನ್ನು ಧರ್ಮರಕ್ಷಣೆಯ ಪುಣ್ಯ ಕಾರ್ಯವಾಗಿಸಿಬಿಟ್ಟಿದೆ. ನರಹತ್ಯೆಯನ್ನು ಕಳಂಕ ಮುಕ್ತಗೊಳಿಸಿ ಬಿಟ್ಟಿದೆ.
ಈ ರೀತಿ ದೇಶದಲ್ಲಿ ಹಲವೆಡೆ ನಡೆದ ಗುಂಪು ಹತ್ಯೆಯ ವಿಭಿನ್ನ ಪ್ರಕರಣಗಳನ್ನು ಅಧ್ಯಯನ ಮಾಡಿದರೆ, ಅವುಗಳ ಹಿಂದೆ ಕೆಲವು ನಿರ್ದಿಷ್ಟ ಬಗೆಯ ಸಂಶಯಗಳು, ವದಂತಿ, ಆತಂಕ, ಮೌಢ್ಯ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸಿರುವುದು ಎದ್ದು ಕಾಣುತ್ತದೆ. ಉದಾ:
* ಮಕ್ಕಳನ್ನು ಅಪಹರಿಸಿದ್ದಾರೆ ಅಥವಾ ಅಪಹರಿಸಲು ಪ್ರಯತ್ನಿಸುತ್ತಿದ್ದಾರೆಂಬ ಸಂಶಯ,
* ಜಾತಿ ನಿಯಮವನ್ನು ಉಲ್ಲಂಘಿಸಿದ್ದಾರೆಂಬ ರೋಷ,
* ಭಿನ್ನ ಜಾತಿ ಅಥವಾ ಧರ್ಮದ ಗಂಡು ಮತ್ತು ಹೆಣ್ಣು ಪರಸ್ಪರ ಸಂಪರ್ಕದಲ್ಲಿದ್ದಾರೆಂಬ ಅನುಮಾನ,
* ಮಾಟ-ಮಂತ್ರ ಅಥವಾ ವಾಮಾಚಾರ ಮಾಡಿದ್ದಾರೆಂಬ ಸಂದೇಹ,
* ದನವನ್ನು ಕೊಂದಿದ್ದಾರೆ, ದನ ಕದ್ದಿದ್ದಾರೆ ಅಥವಾ ದನ ಸಾಗಿಸುತ್ತಿದ್ದಾರೆಂಬ ಆರೋಪ,
* ಗೋಮಾಂಸ ತಿಂದಿದ್ದಾರೆ, ಮಾರಿದ್ದಾರೆ ಅಥವಾ ಸಂಗ್ರಹಿಸಿದ್ದಾರೆ ಎಂಬ ಸಂದೇಹ,
* ರಸ್ತೆ ಅಪಘಾತವಾದಾಗ, ಅದಕ್ಕೆ ಚಾಲಕನೇ ಹೊಣೆ ಎಂಬ ನಂಬಿಕೆ,
* ಕಳವು ಅಥವಾ ದರೋಡೆ ಮಾಡಿದ್ದಾರೆ ಅಥವಾ ಅದಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬ ಆಶಂಕೆ,
* ಎಲ್ಲೋ ಬೇರೆ ಊರಿಂದ ಬಂದಿರುವ ಅಪರಿಚಿತರಿಂದ ಊರವರಿಗೆ ಅಪಾಯವಿದೆ ಎಂಬ ಆತಂಕ,
* ಕಾಲೇಜು/ಹಾಸ್ಟೆಲ್‌ಗೆ ಹೊಸದಾಗಿ ಬಂದ ವಿದ್ಯಾರ್ಥಿಗಳನ್ನು ಈ ಹಂತದಲ್ಲೇ ಮಣಿಸಿಬಿಡಬೇಕೆಂಬ ಸೀನಿಯರ್‌ಗಳ ಛಲ.
ನಾವು ನಾಗರಿಕರು, ನಾವು ಆಧುನಿಕರು ಎಂಬ ನಮ್ಮೆಲ್ಲಾ ಬೊಗಳೆಗಳು ಎಷ್ಟು ಟೊಳ್ಳು ಎಂಬುದನ್ನು ಜಗತ್ತಿಗೆ ತೋರಿಸುವ ಈ ಬಗೆಯ ಹಲವು ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇವೆ ಮತ್ತು ಪ್ರಮುಖ ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಅವುಗಳನ್ನು ಜಗತ್ತಿಗೆ ತೋರಿಸುತ್ತಲೂ ಇರುತ್ತವೆ.
ಗುಂಪು ಹತ್ಯೆಯ ಈ ಎಲ್ಲ ಪ್ರಕರಣಗಳಲ್ಲೂ, ಬಲಿಯಾದವರು ಯಾರೇ ಇರಲಿ, ಹತ್ಯೆಯ ಹಿಂದಿರುವ ನೆಪ ಏನೇ ಇರಲಿ, ಹತ್ಯೆ ಮಾಡಿದವರು ಪರಮ ಹೇಡಿಗಳು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ನಮ್ಮ ಸಮಾಜದಲ್ಲಿ ಕೆಲವು ಹೇಡಿಗಳು ಈ ರೀತಿ ತಾವು ಶೂರರೆಂದು ತೋರಿಸಿಕೊಳ್ಳುವುದಕ್ಕೆ ಅವಕಾಶ ಹುಡುಕುತ್ತಿರುತ್ತಾರೆ. ತಾವು ಪರಮ ಹೇಡಿಗಳೆಂಬುದು ಅವರಿಗೆ ತಿಳಿದಿರುತ್ತದೆ. ಆದ್ದರಿಂದ ಎಲ್ಲಾದರೂ ಯಾರಾದರೂ ದುರ್ಬಲರು, ಅಸಹಾಯಕರು ಕೈಗೆ ಸಿಕ್ಕರೆ ಮತ್ತು ಅವರ ಮುಂದೆ ‘ಶೌರ್ಯ ಪ್ರದರ್ಶನ’ ಮಾಡಿದರೆ ತಮಗೆ ಯಾವುದೇ ಅಪಾಯ ಇಲ್ಲ ಎಂದು ಶೇ. 100 ಖಚಿತವಾಗಿದ್ದರೆ ಅವರು ಸಾಹಸಕ್ಕಿಳಿದು ಬಿಡುತ್ತಾರೆ. ಅಶಕ್ತ ದುರ್ಬಲರನ್ನು ಹಿಂಸಿಸುವ ಮೂಲಕ ಈ ಹೇಡಿಗಳು ತಮ್ಮ ‘ಶಕ್ತಿ’ಯನ್ನು ಪ್ರದರ್ಶಿಸುತ್ತಾರೆ.
ಸರಕಾರ ಸಕ್ರಿಯವಾಗಿರುವ ಮತ್ತು ನಾಗರಿಕರು ಸಂವೇದನಾಶೀಲರಾಗಿರುವ ಯಾವುದೇ ಸಮಾಜದಲ್ಲಿ ಇಂತಹ ಕರಾಳ ಶಕ್ತಿಪ್ರದರ್ಶನ ಅಥವಾ ಶೌರ್ಯ ಪ್ರದರ್ಶನ ಖಂಡಿತ ಸಾಧ್ಯವಾಗುವುದಿಲ್ಲ. ಸರಕಾರಗಳು ದುರ್ಬಲ ಹಾಗೂ ನಿಷ್ಕ್ರಿಯವಾಗಿರುವಲ್ಲಿ ಮತ್ತು ನಾಗರಿಕರು, ತಮ್ಮ ಕಣ್ಣ ಮುಂದೆ ಯಾರ ಮೇಲಾದರೂ ಅನ್ಯಾಯ ನಡೆಯುತ್ತಿರುವುದನ್ನು ಕಂಡಾಗ ಅದನ್ನು ವಿರೋಧಿಸುವ ಬದಲು, ಅದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದು ಶವಗಳಂತೆ ಮೌನವಾಗಿ ಹಾದು ಹೋಗುವಷ್ಟು ನಿಸ್ತೇಜ, ನಿರ್ಲಿಪ್ತ ಹಾಗೂ ನಿರ್ಜೀವರಾಗಿರುವಲ್ಲಿ ಮಾತ್ರ ಇದೆಲ್ಲಾ ಸಾಧ್ಯವಾಗುತ್ತದೆ. ಲಜ್ಜಾಸ್ಪದ ದುರಂತವೇನೆಂದರೆ, ಇಂದು ನಮ್ಮ ಸಮಾಜದಲ್ಲಿ ಇದು ಎಲ್ಲೆಂದರಲ್ಲಿ, ಸಾಧ್ಯವಾಗುತ್ತಿದೆ. ಪದೇ ಪದೇ ಸಾಧ್ಯವಾಗುತ್ತಿದೆ.
ದೇಶದಲ್ಲಿ ಸರಕಾರವೆಂಬುದೇನಾದರೂ ಇದೆಯೇ ಎಂಬ ಸಂದೇಹ ಮೂಡಿಸುವ ಈ ಬಗೆಯ ಗುಂಪುಹತ್ಯೆಯ ಕುರಿತು ನಮ್ಮ ಘನ ಸರಕಾರದ ಧೋರಣೆ ಏನು ಗೊತ್ತೇ?
2021 ಡಿಸೆಂಬರ್‌ನಲ್ಲಿ ರಾಜ್ಯಸಭೆಯಲ್ಲಿ, ಟಿಎಂಸಿ ಸಂಸದ ಜೌಹರ್ ಸರ್ಕಾರ್ ಅವರು ದೇಶದಲ್ಲಿ ನಡೆಯುವ ಗುಂಪು ಹತ್ಯೆಗಳ ಕುರಿತು ಕೇಂದ್ರ ಸರಕಾರದಿಂದ ಮಾಹಿತಿ ಕೇಳಿದ್ದರು. ಅದಕ್ಕೆ ಸರಕಾರವು ನೀಡಿದ ಉತ್ತರ ತೀರಾ ವಿಚಿತ್ರ ಹಾಗೂ ಅಸಂಬದ್ಧವಾಗಿತ್ತು. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ತಮ್ಮ ಉತ್ತರದಲ್ಲಿ ಹೇಳಿದ ಕೆಲವು ಮಾತುಗಳು:
‘‘ಪೊಲೀಸ್ ಮತ್ತು ಕಾನೂನು ವ್ಯವಸ್ಥೆಯು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ... ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (NCRB) ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ, ಅಲ್ಲಿ ದಾಖಲಾದ ವಿವಿಧ ಅಪರಾಧಕೃತ್ಯಗಳ ಕುರಿತು ಮಾಹಿತಿ ಸಂಗ್ರಹಿಸಿ ಪ್ರತಿವರ್ಷ ಆ ಮಾಹಿತಿಗಳನ್ನು ಪ್ರಕಟಿಸುತ್ತಲಿರುತ್ತದೆ. ...vigilante(ಕಾನೂನನ್ನು ಕೈಗೆತ್ತಿಕೊಳ್ಳುವ ಕಿಡಿಗೇಡಿ ಗುಂಪು)ಗಳು ಅಥವಾ ಜನಸಮೂಹ ಅಥವಾ ಜನರ ಗುಂಪುಗಳಿಂದ ಹತರಾದ ಅಥವಾ ಗಾಯಗೊಂಡ ವ್ಯಕ್ತಿಗಳ ಕುರಿತು NCRB ಯಾವುದೇ ಪ್ರತ್ಯೇಕ ದಾಖಲೆಯನ್ನು ಇಟ್ಟು ಕೊಳ್ಳುವುದಿಲ್ಲ. .. 2017ರಲ್ಲಿ NCRBಯು ಈ ಕುರಿತು ಮಾಹಿತಿ ಸಂಗ್ರಹಿಸಿತ್ತು. ಆದರೆ ಪ್ರಸ್ತುತ ಅಪರಾಧದ ನಿರ್ದಿಷ್ಟ ವ್ಯಾಖ್ಯಾನವು ನಿರ್ಧಾರವಾಗಿಲ್ಲವಾದ್ದರಿಂದ ಈ ಕುರಿತಾದ ಮಾಹಿತಿಗಳನ್ನು ವಿಶ್ವಾಸಾರ್ಹವಲ್ಲ ಎಂದು ಪರಿಗಣಿಸಲಾಯಿತು ಮತ್ತು ಈ ಕುರಿತು ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಕೈಬಿಡಲಾಯಿತು.’’
ಈ ರೀತಿ ‘ಸಮಸ್ಯೆಯನ್ನು ಬಚ್ಚಿಡುವುದೇ ಸಮಸ್ಯೆಗೆ ಪರಿಹಾರ’ ಎಂಬ ತನ್ನ ಕರಾಳ ಧೋರಣೆಯನ್ನು ಸರಕಾರವು ಸಂಸತ್ತಿನಲ್ಲೇ ವಿಧ್ಯುಕ್ತವಾಗಿ ಘೋಷಿಸಿಬಿಟ್ಟಿತು. ಗುಂಪುಹತ್ಯೆಯ ಕುರಿತಾದ ಮಾಹಿತಿಯನ್ನು ತಾನು ಬಚ್ಚಿಡುತ್ತಿರುವುದಕ್ಕೆ ಗುಂಪು ಹತ್ಯೆಯ ವ್ಯಾಖ್ಯಾನ ನಿರ್ಧಾರವಾಗಿಲ್ಲದಿರುವುದೇ ಕಾರಣ ಎಂಬ ಸರಕಾರದ ಸಬೂಬು ಎಷ್ಟು ಪೊಳ್ಳು ಎಂಬುದನ್ನು ನಮ್ಮ ದೇಶದ ಬಡ ರೈತರೊಡನೆ ಕೇಳಬೇಕು. ಅದೇ ರಾಜ್ಯಸಭೆಯಲ್ಲಿ ಇದಕ್ಕಿಂತ ಒಂದು ವರ್ಷ ಮುನ್ನ, 2020 ಸೆಪ್ಟಂಬರ್‌ನಲ್ಲಿ ಕಾಂಗ್ರೆಸ್ ಸಂಸದ ಪಿ.ಎಲ್. ಪೂನಿಯಾ ಅವರು NCRB ತನ್ನ ವಾರ್ಷಿಕ ವರದಿಯಲ್ಲಿ ದೇಶದಲ್ಲಿ ಸಂಭವಿಸುತ್ತಿರುವ ರೈತರು ಹಾಗೂ ಕೃಷಿಕರ ಆತ್ಮಹತ್ಯೆ ಪ್ರಕರಣಗಳ ಕುರಿತು ಯಾವುದೇ ಸ್ಪಷ್ಟ ಮಾಹಿತಿಯನ್ನು ಯಾಕೆ ಒದಗಿಸಿಲ್ಲ ಎಂಬ ಪ್ರಶ್ನೆಯನ್ನೆತ್ತಿದ್ದರು. ಅದಕ್ಕುತ್ತರವಾಗಿ ಗೃಹಖಾತೆಯ ರಾಜ್ಯಸಚಿವ ಜಿ.ಕಿಶನ್ ರೆಡ್ಡಿ, ಈ ವಿಷಯದಲ್ಲಿ ವಿವಿಧ ರಾಜ್ಯಸರಕಾರಗಳ ಕಡೆಯಿಂದ NCRBಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲದ ಕಾರಣ ಅದು ತನ್ನ ವರದಿಯಲ್ಲಿ ಆ ವಿಭಾಗವನ್ನೇ ಕೈಬಿಟ್ಟಿತು ಎಂಬ ಸ್ಪಷ್ಟೀಕರಣ ನೀಡಿದರು. ಅದಕ್ಕಿಂತ ಕೆಲವೇ ತಿಂಗಳು ಮುನ್ನ 2019 ನವೆಂಬರ್‌ನಲ್ಲೂ ರೆಡ್ಡಿಯವರು ರಾಜ್ಯಸಭೆಯಲ್ಲಿ ಇದೇ ಬಗೆಯ ಹೇಳಿಕೆ ನೀಡಿದ್ದರು.
ಈ ರೀತಿ ಸರಕಾರವು ಅಧಿಕೃತ ಮಾಹಿತಿ ಒದಗಿಸಲು ನಿರಾಕರಿಸಿದಾಗ, ಖಾಸಗಿ ಸಂಸ್ಥೆಗಳು ಮಾಹಿತಿ ಸಂಗ್ರಹಿಸುವ ಪ್ರಯತ್ನ ನಡೆಸುತ್ತವೆ. ‘ಹ್ಯೂಮನ್ ರೈಟ್ಸ್ ವಾಚ್’ (HRW) ಸಂಸ್ಥೆಯವರ ಪ್ರಕಾರ ವರ್ಷ 2015 ಮತ್ತು 2018ರ ಮಧ್ಯೆ, ದನಸಾಗಿಸುತ್ತಿದ್ದರೆಂದು ಆರೋಪಿಸಿ ಅಥವಾ ಸಂಶಯಿಸಿ ಕಿಡಿಗೇಡಿ ಗುಂಪುಗಳು 44 ಮಂದಿಯನ್ನು ಕೊಂದಿವೆೆ. ‘ಸೆಂಟರ್ ಫಾರ್ ಸ್ಟಡೀ ಆಫ್ ಸೊಸೈಟಿ ಆಂಡ್ ಸೆಕ್ಯುಲರಿಝಮ್’ (CSSS) ಸಂಸ್ಥೆಯವರು 2014ರಿಂದ 2018 ಜುಲೈ ವರೆಗಿನ ಮೂರು ಪ್ರಮುಖ ದಿನಪತ್ರಿಕೆಗಳಿಂದ ಸಂಗ್ರಹಿಸಿದ ಮಾಹಿತಿ ಪ್ರಕಾರ, ಪ್ರಸ್ತುತ ಅವಧಿಯಲ್ಲಿ ಗುಂಪು ಹತ್ಯೆಯ 109 ಪ್ರಕರಣಗಳು ವರದಿಯಾಗಿವೆ.
ಭಾರತದಲ್ಲಿ ಇಂತಹ ಗುಂಪು ಹತ್ಯೆಯ ಘಟನೆಗಳು ಇತ್ತೀಚೆಗೆ ತೀರಾ ಸಾಮಾನ್ಯವಾಗುತ್ತಿವೆ. ಮಾಟಗಾರರು, ಮಂತ್ರವಾದಿಗಳು, ವಾಮಾಚಾರಿಗಳು ಎಂದೆಲ್ಲಾ ಸಂಶಯಿಸಿ ಅಥವಾ ಆರೋಪಿಸಿ ಯಾರನ್ನಾದರೂ ಹಿಡಿದು ಥಳಿಸಿ, ಹಿಂಸಿಸಿ ಕೊಲ್ಲುವ ಘಟನೆಗಳು ಕೂಡಾ ಭಾರತದಲ್ಲಿ ಹಲವೆಡೆ ಹಲವಾರು ಬಾರಿ ನಡೆದಿವೆ. ಊರಲ್ಲಿ ಅಥವಾ ಯಾವುದಾದರೂ ಕುಟುಂಬದಲ್ಲಿ ಏನಾದರೂ ಅನಾಹುತ ನಡೆದಾಗ, ಅದಕ್ಕೆ ಯಾರೋ ಮಾಡಿದ ವಾಮಾಚಾರವೇ ಕಾರಣ ಎಂದು ಊರವರು ನಂಬತೊಡಗುತ್ತಾರೆ ಅಥವಾ ಅವರನ್ನು ಹಾಗೆ ನಂಬಿಸಲಾಗುತ್ತದೆ. ಆ ಬಳಿಕ ಯಾರು ವಾಮಾಚಾರ ಮಾಡಿರಬಹುದು ಎಂಬ ಬಗ್ಗೆ ಊಹಾಪೋಹ ಆರಂಭವಾಗುತ್ತದೆ. ಕೊನೆಗೆ ಯಾವುದೇ ಆಧಾರವಿಲ್ಲದೆ ಯಾರ ಮೇಲಾದರೂ ಗೂಬೆ ಕೂರಿಸಿ ಅವರ ವಿರುದ್ಧ ಪ್ರತೀಕಾರದ ಅಭಿಯಾನ ಆರಂಭವಾಗುತ್ತದೆ. ಕೆಲವೊಮ್ಮೆ ಒಬ್ಬ ವ್ಯಕ್ತಿ ಅಥವಾ ಕುಟುಂಬದ ಮೇಲೆ ಹಗೆತನ ಇರುವವರು, ನೇರವಾಗಿ ಅವರ ವಿರುದ್ಧ ಸೇಡು ತೀರಿಸುವ ಧೈರ್ಯ ಇಲ್ಲದಾಗ, ಅವರು ವಾಮಾಚಾರಿಗಳೆಂದು ಹಾಗೂ ಅವರಿಂದಾಗಿ ಊರಿಗೆ ಇಂತಿಂತಹ ಸಂಕಟ ಬಂದಿದೆ ಎಂದು ವದಂತಿ ಹಬ್ಬಿಸಿ, ಊರವರನ್ನು ಸೇರಿಸಿ ಅವರ ಮೇಲೆ ದಾಳಿಯನ್ನು ಆಯೋಜಿಸಲಾಗುತ್ತದೆ.
ಜಗತ್ತಿನೆಲ್ಲೆಡೆ ಭಾರತದ ಕೀರ್ತಿ ಪತಾಕೆ ಹಾರಿಸಲಿಕ್ಕೋ ಎಂಬಂತೆ ಬಿಬಿಸಿ ನ್ಯೂಸ್‌ನವರು ಈ ಕುರಿತು ಇತ್ತೀಚೆಗಷ್ಟೇ ಒಂದು ವರದಿ ಪ್ರಕಟಿಸಿದರು. ವರದಿ ಪ್ರಕಾರ ಕೆಲವೇ ವಾರಗಳ ಹಿಂದೆ (ಜುಲೈ 2025), ಬಿಹಾರದ ಪೂರ್ಣಿಯ ಜಿಲ್ಲೆಯ ಟೇಟ್ ಗಾಮಾ ಗ್ರಾಮದಲ್ಲಿ, ವಾಮಾಚಾರದ ಸಂದೇಹದ ಮೇಲೆ ಊರವರು ಬುಡಕಟ್ಟು ಜನಾಂಗವೊಂದಕ್ಕೆ ಸೇರಿದ ಒಂದು ಮನೆಯನ್ನು ಸುತ್ತುವರಿದು ಒಂದೇ ಕುಟುಂಬದ ಐದು ಮಂದಿಯನ್ನು ಜೀವಂತ ಸುಟ್ಟು ಹಾಕಿದರು.
NCRB ಒದಗಿಸಿದ ಮಾಹಿತಿ ಪ್ರಕಾರ ಭಾರತದಲ್ಲಿ 2000 ಮತ್ತು 2016ರ ನಡುವೆ, ವಾಮಾಚಾರದಲ್ಲಿ ನಿರತರಾಗಿದ್ದಾರೆಂಬ ಸಂಶಯದ ಮೇಲೆ ಸುಮಾರು 2,500 ಮಂದಿಯ ಗುಂಪು ಹತ್ಯೆ ನಡೆಸಲಾಗಿದೆ. 2000 ಮತ್ತು 2016ರ ನಡುವೆ ಇಂತಹ 2,500 ಕೊಲೆ ಪ್ರಕರಣಗಳು ವರದಿಯಾಗಿವೆ ಮತ್ತು 2000 ಮತ್ತು 2021ರ ನಡುವೆ ಇಂತಹ 3,077 ಹತ್ಯೆಗಳು ನಡೆದಿವೆ. ಇಂತಹ ಪ್ರಕರಣಗಳಲ್ಲಿ ಅತ್ಯಧಿಕವಾಗಿ ಬಲಿಯಾಗುವವರು ಒಂಟಿಯಾಗಿ ಬದುಕುತ್ತಿರುವ ಬಡ, ಅಸಹಾಯಕ ಮಹಿಳೆಯರು, ಬುಡಕಟ್ಟು ಜನಾಂಗದವರು, ವೃದ್ಧರು ಅಥವಾ ಯಾವುದಾದರೂ ಊರಿಗೆ ಇನ್ನೊಂದು ಊರಿನಿಂದ ಹೊಸದಾಗಿ ವಲಸೆ ಬಂದವರಾಗಿರುತ್ತಾರೆ. ಅಸ್ಸಾಂ, ಬಿಹಾರ, ಛತೀಸ್‌ಗಡ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಇಂತಹ ಪ್ರಕರಣಗಳು ಅತ್ಯಧಿಕವಾಗಿ ನಡೆಯುತ್ತವೆ. ಕೇವಲ ಜಾರ್ಖಂಡ್‌ನಲ್ಲೇ 2001 ಮತ್ತು 2021ರ ಮಧ್ಯೆ ಈ ತರದ ಪ್ರಕರಣಗಳಲ್ಲಿ 593 ಮಹಿಳೆಯರು ಹತರಾಗಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಬಿಹಾರದ ಪೂರ್ಣಿಯ ಜಿಲ್ಲೆಯ ಒಂದು ಗ್ರಾಮದಲ್ಲಿ ಒಂದು ಮನೆಗೆ ಬೆಂಕಿ ಹಚ್ಚಿ ಕುಟುಂಬದ ಐದು ಮಂದಿಯನ್ನು ಜೀವಂತ ಸುಟ್ಟು ಕೊಲ್ಲಲಾಗಿತ್ತು. ಊರಲ್ಲಿ ಒಬ್ಬ ಹುಡುಗ ಅನಾರೋಗ್ಯದಿಂದಾಗಿ ಮೃತನಾಗಿದ್ದ. ಆತನ ಮರಣಕ್ಕೆ ಪ್ರಸ್ತುತ ಕುಟುಂಬದವರು ಮಾಟ ಮಾಡಿರುವುದೇ ಕಾರಣ ಎಂದು ಮಾಂತ್ರಿಕನೊಬ್ಬ ಮೃತನ ಕುಟುಂಬದವರನ್ನು ನಂಬಿಸಿದ್ದ. ಆ ಕುಟುಂಬದವರು ತಮ್ಮ ಬೆಂಬಲಿಗರನ್ನು ಸೇರಿಸಿ ಶಂಕಿತ ಕುಟುಂಬದವರ ಮನೆ ಮೇಲೆ ದಾಳಿ ಮಾಡಿ ಪ್ರಸ್ತುತ ಭೀಕರ ಕೃತ್ಯ ನಡೆಸಿದ್ದರು.
2019 ಜನವರಿಯಲ್ಲಿ ಒಡಿಶಾದ ಗ್ರಾಮವೊಂದರಲ್ಲಿ ಕಿಡಿಗೇಡಿಗಳ ಗುಂಪೊಂದು ಒಬ್ಬ ಮಹಿಳೆಯನ್ನು ಮಾಟಗಾತಿ ಎಂದು ಶಂಕಿಸಿ ಆಕೆಯ ಮನೆಯ ಮೇಲೆ ದಾಳಿ ನಡೆಸಿತ್ತು. ದಾಳಿಯಲ್ಲಿ ಆಕೆಯನ್ನು ಮಾತ್ರವಲ್ಲ, ಕ್ರಮವಾಗಿ ಒಂದು, ನಾಲ್ಕು, ಏಳು ಮತ್ತು ಹನ್ನೆರಡು ವರ್ಷ ವಯಸ್ಸಿನ ನಾಲ್ಕು ಮಂದಿ ಅಮಾಯಕ ಮಕ್ಕಳನ್ನೂ ಥಳಿಸಿ ಕೊಲ್ಲಲಾಯಿತು
ಕಳೆದ ವರ್ಷ ಮೇ ತಿಂಗಳಲ್ಲಿ ಮಹಾರಾಷ್ಟ್ರದ ಬಾರ್ಸೆವಾಡ ಗ್ರಾಮದಲ್ಲಿ ಮೂರುವರೆ ವರ್ಷದ ಮಗುವೊಂದು ಅನಾರೋಗ್ಯದಿಂದ ಸಾವನ್ನಪ್ಪಿತು. ಈ ಕುರಿತು ಗ್ರಾಮ ಪಂಚಾಯತ್ ಸಭೆ ನಡೆದು ಪ್ರಸ್ತುತ ಸಾವಿಗೆ ಊರಲ್ಲಿದ್ದ ಇಬ್ಬರು ವ್ಯಕ್ತಿಗಳು ಮಾಟ-ಮಂತ್ರ ಮಾಡಿದ್ದೇ ಕಾರಣ ಎಂದು ನಿರ್ಧರಿಸಲಾಯಿತು. ಅದೇ ದಿನ ರಾತ್ರಿ ಊರಿನ ಹಲವಾರು ಮಂದಿ ಸೇರಿ ಆ ಇಬ್ಬರನ್ನು ಹಿಡಿದು ಜೀವಂತ ಸುಟ್ಟು ಕೊಂದು ಬಿಟ್ಟರು.
ಗುಂಪು ಹತ್ಯೆಯ ಇನ್ನೊಂದು ಪ್ರಕಾರವಂತೂ ಅತ್ಯಂತ ಭಯಾನಕವಾಗಿದೆ. ಈ ಹತ್ಯೆಗಳು ನಡೆಯುವುದು ಅಜ್ಞಾತ ಕುಗ್ರಾಮಗಳಲ್ಲಿ, ಬೀದಿಗಳಲ್ಲಿ ಅಥವಾ ಪೇಟೆಗಳಲ್ಲಿ ಅಲ್ಲ. ಇವು ನಮ್ಮ ಸಮಾಜದ ಭವಿಷ್ಯವನ್ನು ನಿರ್ಮಿಸುವ ಪ್ರತಿಷ್ಠಿತ ವಿದ್ಯಾಕೇಂದ್ರಗಳಲ್ಲಿ ನಡೆಯುತ್ತವೆ. ಇಲ್ಲಿ ಬಲಿಯಾಗುವವರು ಭರ್ಜರಿ ಕನಸುಗಳೊಂದಿಗೆ ಹೊಸದಾಗಿ ಕಾಲೇಜು ಸೇರುವ ವಿದ್ಯಾರ್ಥಿಗಳಾಗಿರುತ್ತಾರೆ ಮತ್ತು ಅವರನ್ನು ಕೊಲ್ಲುವ ಕಟುಕರು ಅದೇ ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳಾಗಿರುತ್ತಾರೆ. ಆರ್‌ಟಿಐ ಮೂಲಕ ಪ್ರಾಪ್ತ ಮಾಹಿತಿಯ ಪ್ರಕಾರ ವರ್ಷ 2012 ಮತ್ತು 2023ರ ನಡುವೆ ದೇಶದ ವಿವಿಧ ಕ್ಯಾಂಪಸ್‌ಗಳಲ್ಲಿ ರ್ಯಾಗಿಂಗ್ ಹೆಸರಲ್ಲಿ ಜೂನಿಯರ್ ವಿದ್ಯಾರ್ಥಿಗಳನ್ನು ಹಿಂಸಿಸುವ ಕ್ರೂರ ಪ್ರಕ್ರಿಯೆಯಲ್ಲಿ 78 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಕ್ಯಾಂಪಸ್‌ಗಳನ್ನು ಹಿಂಸೆಯಿಂದ ಮುಕ್ತವಾಗಿಡು ವುದಕ್ಕಾಗಿಯೇ ಮುಡಿಪಾಗಿರುವ ಕೋಲ್ಕತಾ ಮೂಲದ ‘ಸೊಸೈಟಿ ಎಗೈನ್ಸ್ಟ್ ವಯಲೆನ್ಸ್ ಇನ್ ಎಜುಕೇಶನ್’ (SAVE) ಸಂಸ್ಥೆಯವರ ಪ್ರಕಾರ 2022ರಿಂದ 2024ವರೆಗಿನ ಅವಧಿಯಲ್ಲಿ ರ್ಯಾಗಿಂಗ್ ಪಿಡುಗಿಗೆ 51 ಮಂದಿ ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಸೀನಿಯರ್ ಹೇಡಿಗಳು ಗುಂಪು ಕಟ್ಟಿಕೊಂಡು ಜೂನಿಯರ್ ವಿದ್ಯಾರ್ಥಿಗಳ ಬೇಟೆಗೆ ಹೊರಡುವುದು, ಅವರಿಗೆ ವಿವಿಧ ಬಗೆಯ ಹಿಂಸೆ ನೀಡುವುದು ಮತ್ತು ಏನಾದರೂ ಪ್ರತಿರೋಧ ಎದುರಾದಾಗ ಮಾರಕ ಪ್ರಹಾರ ಮಾಡಿ ಮುಗ್ಧ ಜೂನಿಯರ್‌ಗಳ ಪ್ರಾಣಹರಣಕ್ಕೆ ಕಾರಣರಾಗುವುದು - ಹೇಗಿದೆ ನಮ್ಮ ಕೆಲವು ಉನ್ನತ ಶಿಕ್ಷಣ ಕೇಂದ್ರಗಳ ಈ ದೃಶ್ಯಾವಳಿ? ರ್ಯಾಗಿಂಗ್ ಕಿರುಕುಳ ತಾಳಲಾಗದೆ ತಮ್ಮ ಮನೆಗಳಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ಎಷ್ಟೆಂಬುದು ಯಾರಿಗೂ ತಿಳಿದಿಲ್ಲ. NCRB ಒದಗಿಸಿದ ಮಾಹಿತಿ ಪ್ರಕಾರ ಭಾರತದಲ್ಲಿ ಕೇವಲ ವರ್ಷ 2022ರಲ್ಲೇ 13,044 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಎಷ್ಟು ಮಂದಿ ರ್ಯಾಗಿಂಗ್ ಪೀಡಿತರು ಎಂಬ ಮಾಹಿತಿ ಲಭ್ಯವಿಲ್ಲ. ರ್ಯಾಗಿಂಗ್‌ಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಎಷ್ಟೋ ಪ್ರಕರಣಗಳನ್ನು ಶ್ರೀಮಂತ ಶಿಕ್ಷಣ ಸಂಸ್ಥೆಗಳ ಪ್ರಭಾವಶಾಲಿ ಆಡಳಿತ ಮಂಡಳಿಯವರು ಮತ್ತು ಸರಕಾರಿ ಅಧಿಕಾರಿಗಳು ಸೇರಿ ಯಾವೆಲ್ಲ ರೀತಿಯಲ್ಲಿ ಮುಚ್ಚಿಹಾಕುತ್ತಾರೆ ಎಂಬುದು ಮಾತ್ರ ಅನೇಕರಿಗೆ ತಿಳಿದಿದೆ.
ಇಲ್ಲಿ ವಿವಿಧ ರೂಪದ ಇಷ್ಟೆಲ್ಲಾ ನರಹತ್ಯೆಗಳನ್ನು ಪ್ರಸ್ತಾಪಿಸಿರುವುದು, ಅಕ್ರಮವಾಗಿ ನಷ್ಟಗೊಂಡ ಪ್ರಸ್ತುತ ಎಲ್ಲ ಜೀವಗಳ ರಕ್ಷಣೆಯ ಅಂತಿಮ ಹೊಣೆ ಹೊತ್ತುಕೊಳ್ಳಬೇಕಾದ ಸರಕಾರ, ಆಡಳಿತ ಮತ್ತು ಕಾನೂನು ವ್ಯವಸ್ಥೆಯ ನಾಡಿ ತಪಾಸಣೆಗಾಗಿಯೇ ಹೊರತು ಹತರಾದ ಬಡಪಾಯಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವುದಕ್ಕಲ್ಲ. ನಾವು ನಾಗರಿಕವೆಂದು ಕರೆಯುವ ಸಮಾಜದಲ್ಲಿ ಎಲ್ಲರಿಗೆ ಘನತೆಯೊಂದಿಗೆ ಭದ್ರತೆ ಸಿಗಬೇಕಿದ್ದರೆ, ಯಾರ ಜೀವವೂ ಕಿಡಿಗೇಡಿ ಹೇಡಿಗಳ ಕೃಪೆಯನ್ನು ಅವಲಂಬಿಸದೆ ಇರಬೇಕಿದ್ದರೆ ಇಲ್ಲಿ ಕಾನೂನು ವ್ಯವಸ್ಥೆಯ ಪುನಶ್ಚೇತನವಾಗಬೇಕು. ದೇಶದ ಪ್ರತಿಯೊಬ್ಬ ನಾಗರಿಕನೂ ಎಲ್ಲ ನಾಗರಿಕರ ಪ್ರತಿನಿಧಿಯಾಗಿರುತ್ತಾನೆ. ದೇಶದ ಯಾವುದೇ ಭಾಗದಲ್ಲಿ ಒಬ್ಬ ನಾಗರಿಕನ ಮೇಲೆ ಅನ್ಯಾಯವಾದಾಗ, ಇತರೆಲ್ಲ ನಾಗರಿಕರು ಅದನ್ನು ಸ್ವತಃ ತಮ್ಮ ಮೇಲಾದ ಅನ್ಯಾಯವೆಂದು ಪರಿಗಣಿಸಿ ಅದನ್ನು ಬಲವಾಗಿ ಪ್ರತಿಭಟಿಸುವ ತನಕ ವ್ಯವಸ್ಥೆಯು ಮರುಜೀವ ಪಡೆದುಕೊಂಡು, ಜಾಗೃತವಾಗಿ, ತನ್ನನ್ನು ತಿದ್ದಿಕೊಂಡು ತನ್ನ ಕರ್ತವ್ಯ ನಿರ್ವಹಿಸತೊಡಗುವ ಸಾಧ್ಯತೆ ಇಲ್ಲ. ಆ ತನಕ, ಹೇಡಿ ಕಿಡಿಗೇಡಿಗಳೇ ನಮ್ಮ ಆಡಳಿತಗಾರರೆಂಬುದನ್ನು ಭಾರವಾದ ಹೃದಯದೊಂದಿಗೆ ಒಪ್ಪಿಕೊಳ್ಳೋಣ.







